ಇಸ್ಲಾಮಾಬಾದ್: 73 ವರ್ಷಗಳ ನಂತರ ಹಿಂದೂ ಧರ್ಮೀಯ ಯುವತಿ ಸನಾ ರಾಮಚಂದ್ ಪಾಕಿಸ್ತಾನದಲ್ಲಿ ಪ್ರತಿಷ್ಠಿತ ಪರೀಕ್ಷೆ ಎಂದು ಪರಿಗಣಿಸಲಾದ ಕೇಂದ್ರಿಯ ಸುಪೀರಿಯರ್ ಸರ್ವೀಸಸ್ (ಸಿಎಸ್ಎಸ್) ಅನ್ನು ತೇರ್ಗಡೆ ಹೊಂದಿ ಗಮನ ಸೆಳೆದಿದ್ದಾರೆ. ಈ ಮೂಲಕ ಕಠಿಣ ಪರೀಕ್ಷೆ ಪಾಸ್ ಮಾಡಿರುವ ಪಾಕಿಸ್ತಾನದ ಮೊದಲ ಹಿಂದೂ ಯುವತಿ ಎಂಬ ಸಾಧನೆ ಮಾಡಿದರು.
ಪಾಕಿಸ್ತಾನದಲ್ಲಿ ನಡೆಯುವ ಸಿಎಸ್ಎಸ್ ಪರೀಕ್ಷೆ ಸರ್ಕಾರದ ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸುವ ವಿಚಾರದಲ್ಲಿ ಭಾರತದಲ್ಲಿ ನಡೆಯುವ ಸಿವಿಲ್ ಸರ್ವಿಸ್ ಪರೀಕ್ಷೆಗೆ ಸರಿಸಮಾನವಾಗಿದೆ. ಮೊದಲ ಪ್ರಯತ್ನದಲ್ಲೇ ಪರೀಕ್ಷೆ ಪಾಸ್ ಮಾಡಿರುವ ಸನಾ ರಾಮಚಂದ್, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಶಿಕರ್ಪುರ ಜಿಲ್ಲೆಯ ಗ್ರಾಮೀಣ ಪ್ರದೇಶದ ನಿವಾಸಿ.
ಸಿಎಸ್ಎಸ್ ಪರೀಕ್ಷೆಯಲ್ಲಿ ಪ್ರತಿವರ್ಷ ಶೇ 2ರಷ್ಟು ಅಭ್ಯರ್ಥಿಗಳು ಮಾತ್ರ ತೇರ್ಗಡೆಯಾಗುತ್ತಾರೆ. ಆದರೆ ಈ ವರ್ಷ ಹಿಂದೂ ಸಮುದಾಯದ ಯುವತಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದು ಎಲ್ಲರ ಗಮನ ಸೆಳೆದಿದ್ದಾರೆ.
ಸನಾ ರಾಮಚಂದ್ ಎಂಬಿಬಿಎಸ್ ಶಿಕ್ಷಣ ಮುಗಿಸಿದ್ದಾರೆ. 2016ರಲ್ಲಿ ಬೆನಜೀರ್ ಭುಟ್ಟೋ ವೈದ್ಯಕೀಯ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಶಿಕ್ಷಣ ಪಡೆದಿರುವ ಇವರು ಸಿಎಸ್ಎಸ್ ಪರೀಕ್ಷೆಗೆ ಕಠಿಣ ತಯಾರಿ ನಡೆಸಿದ್ದರು.