ಹೈದರಾಬಾದ್/ಮುಂಬೈ: ದೇಶಾದ್ಯಂತ ಗಣೇಶ ಮೂರ್ತಿಗಳ ನಿಮಜ್ಜನದ ಸಂಭ್ರಮ ಮಾಡಿದ್ದು, ಹೈದರಾಬಾದ್ ಹಾಗೂ ಮುಂಬೈನ ಬೀದಿಗಳಲ್ಲಿ ಗುರುವಾರ ಸಂಜೆ ಬೃಹತ್ ಗಣೇಶ ಮೂರ್ತಿಗಳ ಮೆರವಣಿಗೆ ನಡೆಯಿತು.
ಮುಂಬೈನ ಪ್ರಸಿದ್ಧ ಲಾಲ್ ಬಾಗ್ಚಾ ಗಣೇಶನ ನಿಮಜ್ಜನ ಅದ್ದೂರಿಯಾಗಿ ಜರುಗಿತು. ಲಾಲ್ ಬಾಗ್ಚಾ ರಾಜ ಎಂದೇ ಇಲ್ಲಿನ ಗಣಪತಿ ಪ್ರಸಿದ್ಧ ಪಡೆದಿದ್ದು, ನಿಮಜ್ಜನಕ್ಕೂ ಮುನ್ನ ಬೃಹತ್ ಗಣೇಶ ಮೂರ್ತಿಯ ಭಾರಿ ಮೆರವಣಿಗೆ ನಡೆಯಿತು. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಗಣೇಶೋತ್ಸವ ಕಳೆಗುಂದಿತ್ತು. ಹೀಗಾಗಿ ಭಾರಿ ಗಣೇಶ ಮೂರ್ತಿಗಳ ಮೆರವಣಿಗೆ ಉದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು.
ಇತ್ತ, ಹೈದರಾಬಾದ್ನಲ್ಲೂ ಪ್ರಸಿದ್ಧ ಖೈರತಾಬಾದ್ ಗಣೇಶ ಮೂರ್ತಿಯ ನಿಮಜ್ಜನ ನಡೆಯಿತು. ಪ್ರತಿ ವರ್ಷ ವಿಶೇಷ ರೂಪದಲ್ಲಿ ಖೈರತಾಬಾದ್ ಗಣೇಶ ಮೂರ್ತಿ ಇರುತ್ತದೆ. ಈ ವರ್ಷ ಶ್ರೀ ಪಂಚಮುಖ ಲಕ್ಷ್ಮಿ ಮಹಾ ಗಣಪತಿಯ ರೂಪದಲ್ಲಿ ಕಾಣಿಸಿಕೊಂಡಿದ್ದಾಳೆ. ಅಲ್ಲದೇ, ಈ ಬಾರಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಬದಲಿಗೆ ಶಿಲ್ಪಿ ರಾಜೇಂದರ್ ಅವರಿಂದ ಮೂಡಿದ 50 ಅಡಿ ಮಣ್ಣಿನ ಪ್ರತಿಮೆ ವಿಶೇಷ ಆಕರ್ಷಣೆಯಾಗಿತ್ತು.
ಪ್ರತಿ ವರ್ಷ 40 ಟನ್ ಗಿಂತ ಕಡಿಮೆ ತೂಕವಿದ್ದ ಮಹಾ ಗಣಪತಿ ಈ ಬಾರಿ ಮಣ್ಣಿನಿಂದ ಮಾಡಲಾಗಿರುವುದರಿಂದ 70 ಟನ್ ಭಾರಕ್ಕೆ ತಲುಪಿದೆ. ಗಣೇಶ ಮೂರ್ತಿ ನಿಮಜ್ಜನದ ಗುರುವಾರ ಮಧ್ಯರಾತ್ರಿಯಿಂದಲೇ ವ್ಯವಸ್ಥೆ ಮಾಡಲಾಗಿತ್ತು. ಬೃಹತ್ ವಿಗ್ರಹವನ್ನು 70 ಅಡಿ ಉದ್ದ ಮತ್ತು 11 ಅಡಿ ಅಗಲದ 26 ಟೈರ್‌ನ ವಿಶೇಷ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಖೈರತಾಬಾದ್‌ನಿಂದ ಎನ್‌ಟಿಆರ್ ಮಾರ್ಗದವರೆಗೆ ದಾರಿ ಉದ್ದಕ್ಕೂ ಭಕ್ತರ ಜಯಘೋಷದ ನಡುವೆ ಮಹಾ ಗಣಪತಿಯ ಮೆರವಣಿಗೆ ಸಾಗಿತು.