ನವದೆಹಲಿ : ಅಲೋಪತಿ ವೈದ್ಯಕೀಯ ಪದ್ದತಿಯ ವಿರುದ್ಧ ಹೇಳಿಕೆ ನೀಡಿರುವ ಪತಂಜಲಿ ಯೋಗಪೀಠದ ಮುಖ್ಯಸ್ಥ ಬಾಬಾ ರಾಮ್ ದೇವ್ ವಿರುದ್ಧ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಉತ್ತರಾಖಂಡ ಘಟಕ ಕೆಂಡಾಮಂಡಲವಾಗಿದ್ದು, ರಾಮ್ ದೇವ್ಗೆ 1,00 ಸಾವಿರ ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದೆ.
ತಾನು ಹೇಳಿರುವ ಹೇಳಿಕೆ ಕುರಿತಂತೆ ಬಾಬಾ ರಾಮ್ ದೇವ್ 15 ದಿನದೊಳಗೆ ವಿಡಿಯೋ ಮೂಲಕ ಮತ್ತು ಲಿಖಿತವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ 1,000 ಕೋಟಿ ರೂ. ಮಾನನಷ್ಟ ಪಾವತಿಸಬೇಕು ಎಂದು ಐಎಂಎ ಖಡಕ್ ಎಚ್ಚರಿಕೆ ನೀಡಿದೆ.
ಓದಿ : ಐಎಂಎ - ಫಾರ್ಮಾ ಕಂಪನಿಗಳಿಗೆ 25 ಪ್ರಶ್ನೆ ಕೇಳಿದ ಬಾಬಾ ರಾಮ್ದೇವ್
"ಅಲೋಪತಿ ಔಷಧಗಳನ್ನು ತೆಗೆದುಕೊಂಡ ಲಕ್ಷಾಂತರ ಮಂದಿ ಈವರೆಗೆ ಮೃತಪಟ್ಟಿದ್ದಾರೆ. ಡಿಸಿಜಿಐ ಅನುಮೋದನೆ ನೀಡಿರುವ ಫ್ಯಾವಿಫ್ಲೂ ಹಾಗೂ ಇನ್ನಿತರ ಔಷಧಗಳು ಕೂಡ ಕೋವಿಡ್-19 ಚಿಕಿತ್ಸೆಯಲ್ಲಿ ವಿಫಲಗೊಂಡಿವೆ" ಎಂದು ಬಾಬಾ ರಾಮ್ ದೇವ್ ವಿವಾದಾತ್ಮ ಹೇಳಿಕೆ ನೀಡಿದ್ದರು.
ರಾಮ್ ದೇವ್ ಹೇಳಿಕೆಯ ವಿಡಿಯೋ ಭಾರೀ ವೈರಲ್ ಆಗಿತ್ತು. ಭಾರತೀಯ ವೈದ್ಯಕೀಯ ಸಂಘ ರಾಮ್ ದೇವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಸ್ವತಃ ವೈದ್ಯರಾಗಿರುವ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಸವಾಲು, ಆರೋಪಗಳನ್ನು ಸ್ವೀಕರಿಸಿ, ಆಧುನಿಕ ವೈದ್ಯಕೀಯ ಸೌಲಭ್ಯವನ್ನು ವಿಸರ್ಜನೆ ಮಾಡಲಿ ಅಥವಾ ಬಾಬಾ ರಾಮ್ ದೇವ್ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಿ ಎಂದು ಐಎಂಎ ಆಗ್ರಹಿತ್ತು.
ಖಂಡನೆಗಳು ವ್ಯಕ್ತವಾಗುತ್ತಿದ್ದಂತೆ ಬಾಬಾ ರಾಮ್ ದೇವ್ಗೆ ಪತ್ರ ಬರೆದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು, ಅಲೋಪತಿ ವೈದ್ಯರ ವಿರುದ್ಧದ ಹೇಳಿಕೆ ಹಿಂಪಡೆಯುವಂತೆ ಸೂಚಿಸಿದ್ದರು. ನಡುವೆ, ಇದೀಗ ಮಾನನಷ್ಟೆ ಮೊಕದ್ದಮೆ ಹೂಡುವುದಾಗಿ ಐಎಂಎ ಖಡಕ್ ಎಚ್ಚರಿಕೆ ನೀಡಿದೆ.