ಚೆನ್ನೈ(ತಮಿಳುನಾಡು): ವಿಮಾನ, ಡ್ರೋನ್ಗಳ ರೀತಿಯಲ್ಲೇ ಭಾರತದಲ್ಲಿ ಆಕಾಶದಲ್ಲಿ ಹಾರುವ ಟ್ಯಾಕ್ಸಿ ನೋಡುವ ಕಾಲ ದೂರ ಉಳಿದಿಲ್ಲ. ಅದಕ್ಕಾಗಿ ಐಐಟಿ ಮದ್ರಾಸ್ ಏರೋನಾಟಿಕಲ್ ವಿಭಾಗದ ಪ್ರೊಫೆಸರ್ ಸತ್ಯ ಚಕ್ರವರ್ತಿ ಮತ್ತು ವಿದ್ಯಾರ್ಥಿ ಪ್ರಾಂಜಲ್ ಮೆಹ್ತಾ ಕೆಲಸ ಮಾಡ್ತಿದ್ದಾರೆ. ವಿಮಾನಗಳಂತೆ ಟೇಕಾಫ್, ಲ್ಯಾಂಡ್ ಆಗುವ ವಿದ್ಯುತ್ ಚಾಲಿತ ಟ್ಯಾಕ್ಸಿಗಳ ಅಭಿವೃದ್ಧಿ ಪಡಿಸುವ ಕೆಲಸ ಮಾಡ್ತಿದ್ದಾರೆ.
2024ರ ವೇಳೆಗೆ ಇದು ಕಾರ್ಯಾರಂಭ ಮಾಡುವ ಸಾಧ್ಯತೆ ದಟ್ಟವಾಗಿದ್ದು, ಅದಕ್ಕೋಸ್ಕರ ಇಪ್ಲೇನ್ ಕಂಪನಿ ಸಹ ಇವರೊಂದಿಗೆ ಸಾಥ್ ನೀಡಿದೆ. ಹಾರುವ ಟ್ಯಾಕ್ಸಿಗೆ ಇ200 ಎಂದು ಹೆಸರಿಡಲಾಗಿದೆ. ಉಬರ್, ಓಲಾ ಪ್ರಯಾಣಕ್ಕೆ ಹೋಲಿಕೆ ಮಾಡಿದರೆ ಇದರ ವೇಗ ಸುಮಾರು 10 ಪಟ್ಟು ಹೆಚ್ಚಾಗಿರಲಿದೆ. ಇ200 ಟೇಕ್ ಆಫ್ ಮತ್ತು ಲ್ಯಾಂಡ್ ಆಗಲು ಯಾವುದೇ ರನ್ವೇ ಅಥವಾ ಹೆಲಿಪ್ಯಾಡ್ ಬೇಕಾಗಿಲ್ಲ. ಅಪಾರ್ಟ್ಮೆಂಟ್ ಮಹಡಿ ಮೇಲಿಂದ ಇದು ಹಾರುವ ಸಾಮರ್ಥ್ಯ ಹೊಂದಿದೆ. ಮುಂದಿನ ತಿಂಗಳು ಪರೀಕ್ಷೆ ನಡೆಸಲು ಯೋಜನೆ ಮಾಡಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರೊಫೆಸರ್ ಸತ್ಯ ಚಕ್ರವರ್ತಿ ಮಾತನಾಡಿ, ಓಲಾ, ಉಬರ್ ರೀತಿಯಲ್ಲೇ ಫ್ಲೈಯಿಂಗ್ ಟ್ಯಾಕ್ಸಿ ಅಭಿವೃದ್ಧಿಪಡಿಸಲಾಗಿದೆ. ಎರಡು ಆಸನಗಳ ವಿಮಾನ ಇದಾಗಿದ್ದು, ಒಂದು ಸಮಯದಲ್ಲಿ ಓರ್ವ ಪ್ರಯಾಣಿಕ ಮಾತ್ರ ಪ್ರಯಾಣಿಸಬಹುದಾಗಿದೆ. ಜುಲೈ ತಿಂಗಳಲ್ಲಿ ಪರೀಕ್ಷೆಗೆ ಯೋಜನೆ ಮಾಡಲಾಗಿದ್ದು, 2024ರ ಕೊನೆ ಅಥವಾ 2025ರ ಆರಂಭದ ಹೊತ್ತಿಗೆ ಸಾರ್ವಜನಿಕ ಬಳಕೆಗೆ ತರಲು ಯೋಜನೆ ಹಾಕಿಕೊಂಡಿದ್ದೇವೆ. ಈ ಫ್ಲೈಯಿಂಗ್ ವಿಮಾನವನ್ನ ಒಂದು ಸಲ ಚಾರ್ಜ್ ಮಾಡಿದರೆ 100 ಕಿಲೋ ಮೀಟರ್ ವರೆಗೆ ಪ್ರಯಾಣಿಸಬಹುದಾಗಿದೆ.
ಇಪ್ಲೇನ್ ನಿರ್ವಹಣೆ ವೆಚ್ಚ ಕಡಿಮೆಯಾಗಿದ್ದು, ಪ್ರಯಾಣಿಕರ ನೀಡುವ ದರ ಹೆಚ್ಚಿಲ್ಲ ಎಂದರು. ವಿಶೇಷವೆಂದರೆ ಈ ಹಿಂದೆ ಮೋದಿ ತಮಿಳುನಾಡು ಪ್ರವಾಸದ ಸಂದರ್ಭದಲ್ಲಿ ಐಐಟಿ ಮದ್ರಾಸ್ಗೆ ಭೇಟಿ ನೀಡಿ, ಇ200 ಫ್ಲೈಯಿಂಗ್ ಟ್ಯಾಕ್ಸಿ ತಂಡಕ್ಕೆ ಅಭಿನಂದಿಸಿದ್ದರು. ಆರಂಭದಲ್ಲಿ 100 ಹಾರುವ ಟ್ಯಾಕ್ಸಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಅವುಗಳನ್ನ ಬೆಂಗಳೂರು ಮತ್ತು ಮುಂಬೈ ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಲಾಗಿದೆ.