ಹೈದರಾಬಾದ್ (ತೆಲಂಗಾಣ): ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ಮತ್ತೋರ್ವ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಒತ್ತಡದಿಂದ ಆಕೆ ಪ್ರಾಣ ಕಳೆದುಕೊಂಡಿದ್ದಾಗಿ ತಿಳಿದುಬಂದಿದೆ. ಈ ಮೂಲಕ ಕಳೆದೊಂದು ವರ್ಷದಲ್ಲಿ ಹೈದರಾಬಾದ್ ಐಐಟಿಗೆ ಸೇರಿದ ನಾಲ್ವರು ವಿದ್ಯಾರ್ಥಿಗಳು ಬಲಿಯಾದಂತಾಗಿದೆ.
ಒಡಿಶಾ ಮೂಲದ ಮಮಿತಾ ನಾಯಕ್(21) ಆತ್ಮಹತ್ಯೆಗೆ ಶರಣಾಗಿರುವ ಯುವತಿ. ಎಂ.ಟೆಕ್ ಮೊದಲ ವರ್ಷದ ವಿದ್ಯಾರ್ಥಿನಿಯಾಗಿರುವ ಈಕೆ ಕಳೆದ ತಿಂಗಳಷ್ಟೇ ಐಐಟಿಗೆ ಸೇರಿದ್ದರು. ಸೋಮವಾರ ರಾತ್ರಿ ತನ್ನ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಸಹಪಾಠಿಗಳು ಮಮಿತಾ ಮೃತದೇಹವನ್ನು ಕಂಡು ಹಾಸ್ಟೆಲ್ ನಿರ್ವಾಹಕರಿಗೆ ತಿಳಿಸಿದ್ದಾರೆ.
ಡೆತ್ನೋಟ್ನಲ್ಲಿದೆ ಕಾರಣ: ಮಮಿಯಾ ನಾಯಕ್ ಸಾಯುವ ಮೊದಲು ಡೆತ್ನೋಟ್ ಬರೆದಿಟ್ಟಿದ್ದಾರೆ. ''ಮಾನಸಿಕ ಒತ್ತಡದಿಂದಾಗಿ ತಾನು ಇಂತಹ ಹೆಜ್ಜೆ ಇಡುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ. ಇದರಲ್ಲಿ ಯಾರ ಒತ್ತಾಯವೂ ಇಲ್ಲ'' ಎಂದು ಆಕೆ ಬರೆದಿಕೊಂಡಿದ್ದಾಳೆ. ಈ ಪತ್ರ ಆಕೆಯ ಕೋಣೆಯಲ್ಲಿ ಪೊಲೀಸರಿಗೆ ಸಿಕ್ಕಿದೆ. ಸಂಗಾರೆಡ್ಡಿ ಗ್ರಾಮಾಂತರ ಪೊಲೀಸರು ಕೇಸ್ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ. ವಿದ್ಯಾರ್ಥಿನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ತಿಂಗಳಲ್ಲಿ 2 ನೇ ಆತ್ಮಹತ್ಯೆ; ಸಂಗಾರೆಡ್ಡಿ ಜಿಲ್ಲೆಯ ಕಂಡಿಯಲ್ಲಿರುವ ಐಐಟಿ ಹೈದರಾಬಾದ್ ಕ್ಯಾಂಪಸ್ನಲ್ಲಿ ಒಂದು ತಿಂಗಳ ಅವಧಿಯಲ್ಲಾದ 2ನೇ ಆತ್ಮಹತ್ಯೆ ಕೇಸ್ ಇದಾಗಿದೆ. ನಲ್ಗೊಂಡ ಜಿಲ್ಲೆಯ ಮಿರ್ಯಾಲ್‌ಗುಡಾ ನಿವಾಸಿಯಾದ ಡಿ.ಕಾರ್ತಿಕ್ (21) ಎಂಬಾತ ವಿಶಾಖಪಟ್ಟಣಂನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಈತ ಬಿ.ಟೆಕ್ (ಮೆಕ್ಯಾನಿಕಲ್) ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದ. ಈತ ಜುಲೈ 17ರಂದು ಕ್ಯಾಂಪಸ್ನಿಂದ ಹೊರ ಹೋಗಿದ್ದ ಈತ ಬಳಿಕ ಜುಲೈ 25 ರಂದು ವಿಶಾಖಪಟ್ಟಣಂ ಕಡಲ ತಟದಲ್ಲಿ ಶವವಾಗಿ ಸಿಕ್ಕಿದ್ದ. ಪರೀಕ್ಷೆಗಳಲ್ಲಿ ಬ್ಯಾಕಪ್ ಹೆಚ್ಚಾದ ಕಾರಣ ನೊಂದಿದ್ದ ಈತ ಆತ್ಮಹತ್ಯೆ ಮಾಡಿಕೊಂಡಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿತ್ತು.
ವರ್ಷದಲ್ಲಿ ನಾಲ್ಕು ಜೀವ ಬಲಿ: ಇನ್ನು ಹೈದರಾಬಾದ್ ಐಐಟಿಗೆ ಸೇರಿದ ನಾಲ್ವರು ವಿದ್ಯಾರ್ಥಿಗಳು ಒಂದೇ ವರ್ಷದ ಅಂತರದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಓದಿನ ಒತ್ತಡ, ಮಾನಸಿಕ ಹಿಂಸೆ, ಶಿಕ್ಷಣದಲ್ಲಿ ಹಿನ್ನಡೆ ಕಾರಣಗಳಿಗೆ ಇವರು ಪ್ರಾಣಾಹುತಿ ನೀಡಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಾಜಸ್ಥಾನ ಮೂಲದ ಮೇಘಾ ಕಪೂರ್ (22) ಐಐಟಿ ಹೈದರಾಬಾದ್ ಕ್ಯಾಂಪಸ್ ಬಳಿಯ ಸಂಗಾರೆಡ್ಡಿ ಪಟ್ಟಣದ ಲಾಡ್ಜ್‌ನಲ್ಲಿ ತಂಗಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಗಸ್ಟ್‌ನಲ್ಲಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಂದ್ಯಾಲ್ ಮೂಲದ ಜಿ.ರಾಹುಲ್ ಎರಡನೇ ವರ್ಷದ ಎಂ.ಟೆಕ್ ವಿದ್ಯಾರ್ಥಿಯಾಗಿದ್ದು, ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಇದನ್ನೂ ಓದಿ: ಜೈವಿಕ ಇಂಧನದ ಪೂರೈಕೆ ಜಾಲದ ಅಧ್ಯಯನಕ್ಕೆ ನೂತನ ಯಂತ್ರೋಪಕರಣ ಬಳಸಿದ ಐಐಟಿ ಸಂಶೋಧಕರು!!