ಚಂಡೀಗಢ: ಪತಿ ಮತ್ತು ಆತನ ಕುಟುಂಬದ ವಿರುದ್ಧ ಪತ್ನಿ ಒಂದೇ ಒಂದು ಸುಳ್ಳು ದೂರನ್ನು ನೀಡುವುದು ಕ್ರೌರ್ಯ ಮತ್ತು ಆ ರೀತಿ ಸುಳ್ಳು ದೂರು ನೀಡಿದ ಪತ್ನಿಗೆ ಪತಿ ವಿಚ್ಛೇದನ ನೀಡಬಹುದು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ.
ಹೈಕೋರ್ಟ್ ನ್ಯಾಯಮೂರ್ತಿ ರಿತು ಬಹ್ರಿ ಮತ್ತು ನ್ಯಾಯಮೂರ್ತಿ ಅರ್ಚನಾ ಪುರಿ ಅವರ ವಿಭಾಗೀಯ ಪೀಠವು ರೋಹ್ಟಕ್ ಕೌಟುಂಬಿಕ ನ್ಯಾಯಾಲಯದ ನಿರ್ಧಾರವನ್ನು ಎತ್ತಿಹಿಡಿದಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ವಿಚಾರಣೆಗೆ ಬಂದ ಕ್ರಿಮಿನಲ್ ದೂರೊಂದು ಆಧಾರರಹಿತ ಮತ್ತು ಸುಳ್ಳಿನಿಂದ ಕೂಡಿದ್ದು, ಪತಿ ಮತ್ತು ಆತನ ಕುಟುಂಬಕ್ಕೆ ಕಿರುಕುಳ ಮತ್ತು ಹಿಂಸೆಯನ್ನು ಉಂಟುಮಾಡುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರಕರಣದಲ್ಲಿ ವಿಚ್ಛೇದನದ ವಿರುದ್ಧ ಪತ್ನಿ ಸಲ್ಲಿಸಿದ ಮನವಿಯನ್ನು ಕೋರ್ಟ್ ವಜಾಗೊಳಿಸಿತು. ಮದುವೆಯಾದ ಮೂರು ತಿಂಗಳಲ್ಲೇ ಪತ್ನಿಯು ತನ್ನ ಪತಿ ಮತ್ತು ಆತನ ಕುಟುಂಬದ ಸದಸ್ಯರ ವಿರುದ್ಧ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವೆಲ್ಲವೂ ಸುಳ್ಳು ಎಂದು ಕಂಡುಬಂದಿದೆ. ಹೀಗಾಗಿ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲು ಸೂಕ್ತವಲ್ಲ. ನ್ಯಾಯಾಲಯವು, ಈ ಎಲ್ಲ ಸಂಗತಿಗಳನ್ನು ಪರಿಶೀಲಿಸಿದ ನಂತರ, ಮೇಲ್ಮನವಿ ಸಲ್ಲಿಸಿದ ಪತ್ನಿಯ ವರ್ತನೆ ಮತ್ತು ನಡವಳಿಕೆಯು ಗಂಡನನ್ನು ಮಾನಸಿಕ ಹಿಂಸೆಗೆ ದೂಡಿದೆ ಎಂದು ಹೇಳಿದೆ.
ಏನಿದು ಪ್ರಕರಣ:
2012 ರಲ್ಲಿ ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ಒಂದು ವಿವಾಹ ನೆರವೇರಿತ್ತು. ಪತಿಯ ಪ್ರಕಾರ, ಪತ್ನಿ ಜಗಳಗಂಟ ಸ್ವಭಾವದವಳು. ಹಳ್ಳಿಯಲ್ಲಿರುವ ತನ್ನ ಗಂಡನ ಅವಿಭಕ್ತ ಕುಟುಂಬದಲ್ಲಿ ವಾಸಿಸಲು ಆಕೆಗೆ ಇಷ್ಟವಿರಲಿಲ್ಲ. ಮತ್ತು ಹೆತ್ತವರಿಂದ ದೂರವಾಗಿ ರೋಹ್ಟಕ್‌ನಲ್ಲಿ ಬೇರೆ ಮನೆ ಖರೀದಿಸುವಂತೆ ಒತ್ತಡ ಹೇರಲು ಆರಂಭಿಸಿದಳು. ಗಂಡ ಪ್ರತ್ಯೇಕವಾಗಿ ವಾಸಿಸಲು ನಿರಾಕರಿಸಿದಾಗ, ಹೆಂಡತಿ ಕೋಪಗೊಂಡು, ಪತಿಯ ಕುಟುಂಬ ಸದಸ್ಯರನ್ನು ಸುಳ್ಳು ವರದಕ್ಷಿಣೆ ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದಳು. ಕೊನೆಗೆ ಪತಿಯ ಮನೆಯವರು ರೋಹ್ಟಕ್‌ನಲ್ಲಿ ಈ ದಂಪತಿಗೆ ಬಾಡಿಗೆ ಮನೆ ವ್ಯವಸ್ಥೆ ಮಾಡಿದರು. ಇದರಿಂದ ದಂಪತಿ ಜಗಳ ದೂರವಾಗಿ ಆಕೆ ಸಂತೋಷದಿಂದ ಇರುತ್ತಾಳೆ ಎಂದುಕೊಂಡರು.
ಆದರೆ ಪತಿಯ ಕುಟುಂಬ ಸದಸ್ಯರು ಪದೇ ಪದೆ ಮನೆಗೆ ಬರಲು ಆರಂಭಿಸಿದ್ದರಿಂದ ಪತ್ನಿ ಮತ್ತೆ ಕೋಪಗೊಂಡಳು ಮತ್ತು ಪತಿಯ ಕುಟುಂಬಸ್ಥರನ್ನು ನಿಂದಿಸಲು ಶುರು ಮಾಡಿದಳು. ಪೊಲೀಸರಿಗೆ ದೂರಿನ ಮೇಲೆ ದೂರು ನೀಡಿದಳು. ತನ್ನ ಕುಟುಂಬದ ಪುರುಷ ಸದಸ್ಯರನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿದರು. ಆದರೆ ಎಲ್ಲಾ ದೂರುಗಳು ಸುಳ್ಳು ಮತ್ತು ಆಧಾರರಹಿತ ಎಂದು ಸಾಬೀತಾಗಿದ್ದು, ಪತ್ನಿ ಸುಳ್ಳು ದೂರು ನೀಡಿದರೆ, ಗಂಡ ವಿಚ್ಛೇದನ ಪಡೆಯಬಹುದು ಎಂದು ನ್ಯಾಯಾಲಯ ತೀರ್ಪು ನೀಡಿದೆ.