ಜೈಪುರ್(ರಾಜಸ್ಥಾನ): 2015ರ ಯುಪಿಎಸ್ಸಿ ಟಾಪರ್ಗಳಾಗಿದ್ದ ಟೀನಾ ದಾಬಿ ಹಾಗೂ ಅಥರ್ ಅಮೀರ್ ಖಾನ್ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಇವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ಕಳೆದ ಕೆಲ ತಿಂಗಳ ಹಿಂದೆ ವಿಚ್ಛೇದನ ಪಡೆದುಕೊಂಡಿದ್ದರು. ಇದರ ಬೆನ್ನಲ್ಲೇ ಹಿರಿಯ ಅಧಿಕಾರಿ ಡಾ. ಪ್ರದೀಪ್ ಗವಾಂಡೆ ಜೊತೆ ಟೀನಾ ಸಪ್ತಪದಿ ತುಳಿದಿದ್ದರು. ಇದೀಗ ಅಮೀರ್ ಖಾನ್ ಕೂಡ ಮತ್ತೊಂದು ಮದುವೆ ಸಿದ್ಧರಾಗಿದ್ದಾರೆ.

ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ. ಮೆಹ್ರೀನ್ ಕಾಜ್ ಎಂಬುವವರೊಂದಿಗೆ 2015ರ ಯುಪಿಎಸ್ಸಿ ಬ್ಯಾಚ್‌ನ ಅಥರ್ ಅಮೀರ್ ಖಾನ್ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅದರ ಫೋಟೋ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಕಾಶ್ಮೀರದ ಅನಂತನಾಗ್ ನಿವಾಸಿಗಳಾದ ಐಎಎಸ್ ಅಥರ್ ಅಮೀರ್ ಮತ್ತು ಡಾ. ಮೆಹ್ರಿನ್ ಖಾನ್ ತಮ್ಮ ನಡುವಿನ ಸಂಬಂಧದ ಬಗ್ಗೆ ಬಹಿರಂಗಪಡಿಸಿದ್ದು, ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದಾರೆ. ಮೆಹ್ರಿನ್ ಸದ್ಯ ದೆಹಲಿಯ ರಾಜೀವ್ ಗಾಂಧಿ ಕ್ಯಾನ್ಸರ್ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡ್ತಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಜೋಡಿ ಬರುವ ಅಕ್ಟೋಬರ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: ಪ್ರದೀಪ್ ಗವಾಂಡೆ ಜೊತೆ 2ನೇ ಮದುವೆ ಮಾಡಿಕೊಂಡ ಐಎಎಸ್ ಟಾಪರ್ ಟೀನಾ ದಾಬಿ
ಇವರ ನಿಶ್ಚಿತಾರ್ಥದ ಫೋಟೋಗಳು ಬಹಿರಂಗಗೊಳ್ಳುತ್ತಿದ್ದಂತೆ ಅನೇಕರು ಅಭಿನಂದನೆ ಸಲ್ಲಿಕೆ ಮಾಡ್ತಿದ್ದು, ಸುಮಾರು 40 ಸಾವಿರಕ್ಕೂ ಅಧಿಕ ಜನರು ಈ ಜೋಡಿಯ ಫೋಟೋ ಲೈಕ್ ಮಾಡಿದ್ದಾರೆ.

ಉನ್ನತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಟಿನಾ, ಈಗಾಗಲೇ ತಮ್ಮ ಬ್ಯಾಚ್‌ನ ಸ್ನೇಹಿತ ಅಥರ್ ಅಮೀರ್ ಖಾನ್ ಅವರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು. ಆದರೆ, ಕಳೆದ ಕೆಲ ತಿಂಗಳ ಹಿಂದೆ ವಿಚ್ಛೇದನ ಪಡೆದುಕೊಂಡು ಸಂಬಂಧ ಅಂತ್ಯಗೊಳಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಮದುವೆ ಸಹ ಮಾಡಿಕೊಂಡಿದ್ದರು.