ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಪುಲ್ವಾಮಾದಲ್ಲಿ ಶನಿವಾರ ಭಾರತೀಯ ವಾಯುಪಡೆಯ (ಐಎಎಫ್) ನೇತೃತ್ವದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ ಎಂದು ಭದ್ರತಾ ಸಂಸ್ಥೆಯ ಮೂಲಗಳು ತಿಳಿಸಿವೆ.
ಆದರೆ, ಗುಂಡಿನ ಚಕಮಕಿಯಲ್ಲಿ ಭಾರತೀಯ ವಾಯುಪಡೆಯ ಗರುಡ್ ಕಮಾಂಡೋ ವಿಶೇಷ ಪಡೆಯ ಇಬ್ಬರು ಯೋಧರು ಗಾಯಗೊಂಡಿದ್ದಾರೆ. 2017ರಲ್ಲಿ ಎರಡು ಪ್ರಮುಖ ಕಾರ್ಯಾಚರಣೆಗಳನ್ನು ನಡೆಸಿ ಎಂಟು ಭಯೋತ್ಪಾದಕರನ್ನು ಸದೆಬಡಿದು ಗರುಡ್ ಕಮಾಂಡೋಗಳು ಗಮನ ಸೆಳೆದಿದ್ದರು.
ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಪುಲ್ವಾಮಾ ಜಿಲ್ಲೆಯ ನೈರಾ ಗ್ರಾಮದಲ್ಲಿ ಸೇನೆಯ 55 ರಾಷ್ಟ್ರೀಯ ರೈಫಲ್ಸ್, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೇರಿದಂತೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಸ್ವಲ್ಪ ಸಮಯದ ನಂತರ, ಸ್ಥಳೀಯರು ನೀಡಿದ ಮಾಹಿತಿ ಆಧಾರದ ಮೇಲೆ ಮನೆಯೊಂದರೊಳಗೆ ಭಯೋತ್ಪಾದಕರ ಉಪಸ್ಥಿತಿಯನ್ನು ಗುರುತಿಸುವಲ್ಲಿ ಪಡೆಗಳು ಯಶಸ್ವಿಯಾದವು.
ತಕ್ಷಣವೇ ಮನೆ ಮತ್ತು ಸುತ್ತಮುತ್ತಲಿನ ನಾಗರಿಕರನ್ನು ಭದ್ರತಾ ಸಿಬ್ಬಂದಿ ಸ್ಥಳಾಂತರಿಸಿದರು. ಇದನ್ನು ಅರಿತ ಭಯೋತ್ಪಾದಕರು ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಗುಂಡಿನ ಚಕಮಕಿ ನಡೆದಿದೆ.
ಇದನ್ನೂ ಓದಿ: ಕಾರವಾರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ಮೇಲೆ ದಾಳಿ : ಓರ್ವನ ಬಂಧನ
ಘಟನೆ ವೇಳೆ ಗರುಡ್ ವಿಶೇಷ ಪಡೆಗಳ ಸ್ಕ್ವಾಡ್ರನ್ ಲೀಡರ್ ಸಂದೀಪ್ ಜಂಜಾರಿಯಾ ಅವರ ಎದೆ ಮತ್ತು ಎಡಗೈಗೆ ಎರಡು ಗುಂಡುಗಳು ತಾಗಿವೆ. ಆದರೂ ಕೂಡ ಅವರು ಪರಾರಿಯಾಗುತ್ತಿದ್ದ ಮೂವರು ಉಗ್ರರ ಮೇಲೆ ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಳಿಕ ಅಲ್ಲಿ ಅಡಗಿಕೊಂಡಿದ್ದ ಒಬ್ಬ ಭಯೋತ್ಪಾದಕ ಹೊರ ಬಂದು ಗರುಡ್ ಪಡೆಗಳ ಮೇಲೆ ಗುಂಡು ಹಾರಿಸಿದ್ದಾನೆ. ಆಗ ಗರುಡ್ ಪಡೆಯ ಆನಂದ್ ಎಂಬುವರಿಗೆ ಗುಂಡು ತಗುಲಿದೆ. ತಕ್ಷಣವೇ ನಾಲ್ಕನೇ ಭಯೋತ್ಪಾದಕನನ್ನೂ ಭದ್ರತಾ ಪಡೆ ಹತೈಗೈದಿದೆ. ಗಾಯಾಳು ಯೋಧರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ