ಜಮ್ಮು: ಬಿಗಿ ಭದ್ರತೆಯ ಭಾರತೀಯ ವಾಯುಪಡೆಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದ್ರೋಣ್ ಬಾಂಬ್ ಸ್ಫೋಟದಿಂದ ಸ್ಥಳೀಯರು ದಂಗಾಗಿದ್ದಾರೆ. ಜಮ್ಮುವಿನ IAF ಏರ್ಬೇಸ್ನಲ್ಲಿ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಉಗ್ರರು ಸ್ಫೋಟ ನಡೆಸಲು ಡ್ರೋನ್ ಬಳಸಿದ್ದು, ಬಾಂಬ್ ದಾಳಿ ವೇಳೆ ಉಂಟಾದ ಭಾರೀ ಶಬ್ದಕ್ಕೆ ವಾಯುಪಡೆ ವಿಮಾನ ನಿಲ್ದಾಣದ ಅಕ್ಕಪಕ್ಕದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಇದೇ ಮೊದಲ ಬಾರಿಗೆ ಈ ರೀತಿಯ ಶಬ್ದವೊಂದು ಕಿವಿಗೆ ಬಿದ್ದಿದೆ. ಭಯಾನಕ ಶಬ್ದದಿಂದಾಗಿ ಕರಣ್ ಬಾಗ್, ಗಡ್ಡಿಗರ್, ಬೋಹರ್‌ಕ್ಯಾಂಪ್ ಮತ್ತು ಸತ್ವಾರಿಯ ಸುತ್ತಮುತ್ತಲ ಹಲವಾರು ಜನರು ಗಾಬರಿಗೊಂಡಿದ್ದಾರೆ. ಭೀಕರ ಶಬ್ದ ಕೇಳಿದ ತಕ್ಷಣ ಕೋವಿಡ್ ನಿರ್ಬಂಧಗಳ ಹೊರತಾಗಿಯೂ ವಾಯುಪಡೆಯ ನಿಲ್ದಾಣದತ್ತ ಜನರು ಓಡಿ ಬಂದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
"ಟಿವಿಗಳಲ್ಲಿ ಬಾಂಬ್ ದಾಳಿಯ ಸುದ್ದಿ ಬಂತು. ಈ ಪ್ರದೇಶದಲ್ಲಿ ಭೀತಿಯ ವಾತಾವರಣವಿತ್ತು. ಅಂತಹ ಪ್ರಮುಖ ರಕ್ಷಣಾ ಕೇಂದ್ರದ ಮೇಲೆ ದಾಳಿ ನಡೆಯಬಹುದೆಂದು ನಾವು ಊಹಿಸಿರಲಿಲ್ಲ" ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
"ಇದು ಕಳವಳಕಾರಿ ಸಂಗತಿಯಾಗಿದೆ. ಏಕೆಂದರೆ ಇಂತಹ ದಾಳಿ ಹಿಂದೆಂದೂ ಕೇಳಿಬಂದಿಲ್ಲ. ಬೆಳಿಗ್ಗೆ, ಹಿರಿಯ ಅಧಿಕಾರಿಗಳೊಂದಿಗೆ ಬಾಂಬ್ ವಿಲೇವಾರಿ ದಳಗಳು ಸ್ಥಳವನ್ನು ಪರಿಶೀಲಿಸಿದ ಕಾರಣ ವಾಯುನೆಲೆಯ ಸುತ್ತಲೂ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ. ಜಮ್ಮುವಿನ ಐಎಎಫ್ ನಿಲ್ದಾಣದಲ್ಲಿ ನಡೆದ ದಾಳಿ ಭಯೋತ್ಪಾದಕ ದಾಳಿ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ಡ್ರೋನ್‌ಗಳು ಎಲ್ಲಿಂದ ಬಂದವು ಎಂಬುದನ್ನು ನಿರ್ಧರಿಸುವ ಪ್ರಯತ್ನದಲ್ಲಿ ತನಿಖಾಧಿಕಾರಿಗಳು ವಿಮಾನ ನಿಲ್ದಾಣದ ಗಡಿ ಗೋಡೆಗಳಲ್ಲಿ ಅಳವಡಿಸಲಾದ ಕ್ಯಾಮೆರಾಗಳನ್ನು ಒಳಗೊಂಡಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ. ಆದರೆ, ಎಲ್ಲಾ ಸಿಸಿಟಿವಿ ಕ್ಯಾಮೆರಾಗಳು ರಸ್ತೆ ಬದಿಯಲ್ಲಿ ಕೇಂದ್ರೀಕರಿಸಿವೆ. ಶತ್ರುಗಳ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಗಡಿ ಪ್ರದೇಶಗಳಲ್ಲಿ ನಿಯೋಜಿಸಲಾದ ರಾಡಾರ್‌ಗಳಿಂದ ಡ್ರೋನ್‌ಗಳನ್ನು ಕಂಡುಹಿಡಿಯಲಾಗುವುದಿಲ್ಲ. ಡ್ರೋನ್‌ಗಳನ್ನು ಕಂಡುಹಿಡಿಯಲು ಹಕ್ಕಿಯಷ್ಟು ಚಿಕ್ಕದಾದ ವಸ್ತುಗಳನ್ನು ಸಹ ಪತ್ತೆಹಚ್ಚುವ ವಿಭಿನ್ನ ರಾಡಾರ್ ವ್ಯವಸ್ಥೆಯನ್ನು ಸ್ಥಾಪಿಸಬೇಕು" ಎಂದು ಹೇಳಿದ್ದಾರೆ.
ಪಾಕಿಸ್ತಾನ ಮೂಲದ ಭಯೋತ್ಪಾದಕರು ಇದೇ ಮೊದಲ ಬಾರಿಗೆ ಬಾಂಬ್ ದಾಳಿಗೆ ಡ್ರೋನ್ ಬಳಸಿದ್ದಾರೆ. ಪೊಲೀಸರು ಹೆದ್ದಾರಿಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ ಮತ್ತು ವಿವಿಧ ಸ್ಥಳಗಳಲ್ಲಿ ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ.