ನವದೆಹಲಿ : ಆಪ್ ಶಾಸಕಿ ಅತಿಶಿ, 2020ರ ಚುನಾವಣಾ ಅಫಿಡವಿಟ್‌ನಲ್ಲಿ ಸಲ್ಲಿಸಿದ್ದ ಆಸ್ತಿ ಮತ್ತು ಕೆಲ ವರ್ಷಗಳಿಂದ ಐಟಿಗೆ ಸಲ್ಲಿಸಿರುವ ಆದಾಯಕ್ಕೂ ಹೊಂದಾಣಿಕೆಯಾಗದ ಹಿನ್ನೆಲೆ ಐಟಿ ಇಲಾಖೆ ನೋಟಿಸ್ ನೀಡಿದೆ. ಅತಿಶಿ ಮತ್ತು ಮೂವರು ಮಹಿಳೆಯರು ಸೇರಿದಂತೆ 19 ಅಭ್ಯರ್ಥಿಗಳಿಗೆ ಪರಿಶೀಲನಾ ನೋಟಿಸ್ ಕಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೆಲ ಬಿಜೆಪಿ ಶಾಸಕರಿಗೂ ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.
ಇದು ಚುನಾವಣಾ ಆಯೋಗಕ್ಕೆ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್ಗಳ ಪರಿಶೀಲನೆಗಾಗಿ ತೆರಿಗೆ ಇಲಾಖೆ ಅನುಸರಿಸುವ ಕಾರ್ಯವಿಧಾನದ ಭಾಗವಾಗಿದೆ. ಒಟ್ಟು 666 ಅಫಿಡವಿಟ್‌ಗಳಲ್ಲಿ 19 ಅರ್ಜಿಗಳನ್ನು ಪರಿಶೀಲನೆಗಾಗಿ ಆಯ್ಕೆ ಮಾಡಲಾಗಿದೆ. ಇಸಿಯೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಲಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ '(ಎಸ್‌ಒಪಿ) ಮೂಲಕ ಸಂಪೂರ್ಣ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ಆಪ್ ಶಾಸಕಿ ಅತಿಶಿ, ತಮ್ಮ 2020ರ ಚುನಾವಣಾ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿದ ಸ್ವತ್ತುಗಳು ಹಾಗೂ ಕಳೆದ 10 ವರ್ಷಗಳ ಅವಧಿಯಲ್ಲಿ ಆದಾಯ ತೆರಿಗೆ ರಿಟರ್ನ್ಸ್ಗೆ ಅವರು ಒದಗಿಸಿರುವ ಮಾಹಿತಿ ಹೊಂದಾಣಿಕೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಅವರು ಐಟಿಆರ್ನಲ್ಲಿ ನೀಡಲಾದ ವಿವರಗಳು, ಚುನಾವಣಾ ಅಫಿಡವಿಟ್‌ನಲ್ಲಿ ನೀಡಿದ್ದಕ್ಕಿಂತ ಕಡಿಮೆಯಾಗಿದೆ. ಅಧಿಕೃತ ಅಂಕಿ-ಅಂಶಗಳ ಆಧಾರದ ಮೇಲೆ ಪರಿಶೀಲನೆ ನಡೆಸಲಾಗುತ್ತಿದೆ. ರಾಜಕೀಯ ವ್ಯಕ್ತಿಗಳೆಂದು ಗುರುತಿಸಿಕೊಂಡಿರುವ 19 ಅಭ್ಯರ್ಥಿಗಳು ಹಾಗೂ ಅವರ ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ದೆಹಲಿಯ ಆಡಳಿತಾರೂಢ ಪಕ್ಷ ಆಪ್, ತೆರಿಗೆ ನೋಟಿಸ್ ಅನ್ನು ಹಾಸ್ಯಾಸ್ಪದ ಎಂದು ಕರೆದಿದೆ. ಅದು ಬಿಜೆಪಿಯ ಕೋಮುವಾದಿ ಮುಖವನ್ನು ಬಹಿರಂಗಪಡಿಸುತ್ತದೆ ಎಂದು ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅತಿಶಿ, ನನಗೆ ಭೀತಿಯನ್ನುಂಟು ಮಾಡಲು ಈ ನೋಟಿಸ್ ನೀಡಲಾಗಿದೆ. ನಾನು ಮೋದಿ ಸರ್ಕಾರದ ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ. ಆಪ್ ಮುಖಂಡರಿಗೆ ಕಿರುಕುಳ ನೀಡಲು ಕೇಂದ್ರ ಸರ್ಕಾರ ಏಜೆನ್ಸಿಯೊಂದನ್ನು ಬಳಸಿಕೊಂಡಿದೆ. ಆಪ್ ವಿರುದ್ಧ ಒಂದೇ ಒಂದು ಪ್ರಕರಣ ಸಾಬೀತು ಮಾಡಲು ಅವರಿಂದ ಆಗಲಿಲ್ಲ.
ಐಟಿ ಅಧಿಕಾರಿಗಳು ನನ್ನನ್ನು ಎಲ್ಲಿ ಕರೆದರೂ, ಬ್ಯಾಂಕ್ ಖಾತೆಗಳ ಎಲ್ಲಾ ವಿವರಗಳೊಂದಿಗೆ ನಾನು ಅವರ ಮುಂದೆ ಹಾಜರಾಗುತ್ತೇನೆ ಎಂದರು. ಅಲ್ಲದೆ, ಬಿಜೆಪಿ ಮುಖಂಡರು ತಮ್ಮ ಬ್ಯಾಂಕ್ ಖಾತೆಗಳು ಹಾಗೂ ಆಸ್ತಿ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ಸಿದ್ದರಿದ್ದಾರೆಯೇ ಎಂದು ಸವಾಲೆಸಿದಿದ್ದಾರೆ.
ಇದನ್ನೂ ಓದಿ:ಇಂಧನ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಒಳಗಾದ ಸಾಮಾನ್ಯರಿಗೆ ಸಾಲ ನೀಡಿ: ಕಾಂಗ್ರೆಸ್