ನವದೆಹಲಿ: ಬಿಜೆಪಿ ಸಂಸದ ಗೌತಮ್ ಗಂಭೀರ್ ದೆಹಲಿಯ ಕೋವಿಡ್ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಹರಿಹಾಯ್ದಿದ್ದಾರೆ.
ಈ ಕುರಿತು ಮಾತನಾಡಿದ ಸಂಸದ ಗೌತಮ್ ಗಂಭೀರ್, "ನಾನು ಲಾಕ್‌ಡೌನ್ ಅನ್ನು ಬೆಂಬಲಿಸುತ್ತೇನೆ. ಕೊರೊನಾ ತಡೆಗೆ ಲಾಕ್‌ಡೌನ್ ಬಿಟ್ಟು ಬೇರೆ ದಾರಿ ಇದೆ ಎಂದು ಯೋಚಿಸಬೇಡಿ" ಎಂದರು.
ದೆಹಲಿ ಸಿಎಂ ಕೇಜ್ರಿವಾಲ್ ಕುರಿತು ಮಾತನಾಡಿದ ಅವರು, "ನೀವು ಕಳೆದ ವರ್ಷದಿಂದ ಯಾವುದೇ ಸಿದ್ಧತೆಗಳನ್ನು ಮಾಡಿಲ್ಲವೇ? ನೀವು ಉಪನ್ಯಾಸಗಳನ್ನು ನೀಡುತ್ತೀರಿ. ದೆಹಲಿಯಲ್ಲಿ ಹಾಸಿಗೆಗಳು ಲಭ್ಯವಿರುವ ಯಾವುದೇ ಆಸ್ಪತ್ರೆ ಇದೆಯೇ? ಅಂತ ತಿಳಿಸಿ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮತ್ತಷ್ಟು ಕಠಿಣ ರೂಲ್ಸ್: ದಿನಸಿ, ತರಕಾರಿ ಅಂಗಡಿ ನಾಲ್ಕು ಗಂಟೆ ಮಾತ್ರ ಓಪನ್!
"ಆರು ವರ್ಷದಿಂದ ಸಿಎಂ ಆಗಿದ್ದಾರೆ. ಆರು ವರ್ಷದಿಂದ ದೆಹಲಿಯಲ್ಲಿ ಎಷ್ಟು ಆಸ್ಪತ್ರೆಗಳು ನಿರ್ಮಾಣವಾಗಿವೆ? ತಮ್ಮ ಜಾಹೀರಾತಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ಸಿಎಂ, ಜನತೆಗಾಗಿ ಹಣವನ್ನು ವ್ಯಯಿಸಿದ್ದರೆ ದೆಹಲಿಯಲ್ಲಿ ಈ ಪರಿಸ್ಥಿರಿ ಬರುತ್ತಿರಲಿಲ್ಲ. ಸರ್ಕಾರದ ಬಳಿ ದುಡ್ಡಿಲ್ಲ. ಇವರಿಂದ ಏನೂ ಮಾಡಲು ಸಾಧ್ಯವಿಲ್ಲ. ಇವರು ದೆಹಲಿ ಜನತೆ ಬಳಿ ಕ್ಷಮೆಯಾಚಿಸಬೇಕು" ಎಂದು ವಾಗ್ದಾಳಿ ನಡೆಸಿದ್ದಾರೆ.
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣ ತಡೆಗೆ ದೆಹಲಿ ಸರ್ಕಾರ ಸೋಮವಾರ ಲಾಕ್‌ಡೌನ್ ಘೋಷಿಸಿದೆ. ನಗರದಲ್ಲಿ ಏಪ್ರಿಲ್ 26 ರವರೆಗೆ ಆರು ದಿನಗಳ ಲಾಕ್‌ಡೌನ್ ಜಾರಿಯಲ್ಲಿದೆ.
ಕಳೆದ 24 ಗಂಟೆಗಳಲ್ಲಿ, 240 ಸಾವುಗಳು ವರದಿಯಾಗಿದ್ದು, 23,686 ಹೊಸ ಕೊರೊನಾ ವೈರಸ್ ಸೋಂಕುಗಳು ವರದಿಯಾಗಿವೆ. ಪ್ರಸ್ತುತ ಇಲ್ಲಿ 76,887 ಸಕ್ರಿಯ ಪ್ರಕರಣಗಳಿವೆ.