ಗುವಾಹಟಿ : ಚುನಾವಣೆ ನಡೆಯಲಿರುವ ಮೇಘಾಲಯದಲ್ಲಿನ ರಾಜಕೀಯ ಪರಿಸ್ಥಿತಿ ಕುತೂಹಲಕಾರಿಯಾಗಿದ್ದು, ಅಷ್ಟೇ ಗೊಂದಲಮಯವೂ ಆಗಿದೆ. ಭಾರತೀಯ ಜನತಾ ಪಕ್ಷದ ಉನ್ನತ ನಾಯಕರು ತಮ್ಮ ಸಮ್ಮಿಶ್ರ ಸರ್ಕಾರದ ಹಿಂದಿನ ಪಾಲುದಾರರಾದ ಕಾನ್ರಾಡ್ ಸಂಗ್ಮಾ ಮತ್ತು ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮೇಲೆ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ವಾಗ್ದಾಳಿಯ ಮುಂಚೂಣಿಯಲ್ಲಿದ್ದಾರೆ.
ಕಳೆದ ಐದು ವರ್ಷಗಳಿಂದ ಬಿಜೆಪಿ ಪಕ್ಷವು ಎನ್‌ಪಿಪಿ ನೇತೃತ್ವದ ಸರ್ಕಾರದ ಪಾಲುದಾರನಾಗಿದೆ ಮತ್ತು ಈಗಲೂ ಅದರಲ್ಲಿ ಮುಂದುವರಿದಿದೆ. ಆದಾಗ್ಯೂ, ಮೇಘಾಲಯವು ಎನ್‌ಪಿಪಿ ಆಡಳಿತದಲ್ಲಿ ದೇಶದ ನಂಬರ್ ಒನ್ ಭ್ರಷ್ಟ ರಾಜ್ಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಾಪ್ರಹಾರ ನಡೆಸಿದ್ದಾರೆ. ಆದರೆ ಕಾನ್ರಾಡ್ ಸಂಗ್ಮಾ ಅವರ ಪಕ್ಷದೊಂದಿಗೆ ಯಾವುದೇ ಮೈತ್ರಿ ಹೊಂದಿಲ್ಲ ಎಂದು ರಾಜ್ಯದ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಎನ್‌ಪಿಪಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಭಾಗವಾಗಿದೆ. ಮೇಘಾಲಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಅರ್ನೆಸ್ಟ್ ಮಾವ್ರಿ ಮಾಧ್ಯಮಗಳೊಂದಿಗೆ ಮಾತನಾಡಿ, ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಮೇಘಾಲಯ ರಾಜಕೀಯದಲ್ಲಿ ಸಾಕಷ್ಟು ಗೊಂದಲಗಳಿವೆ, ಎನ್‌ಪಿಪಿ ಮತ್ತು ಬಿಜೆಪಿ ಮಿತ್ರಪಕ್ಷಗಳೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಾವ್ರಿ, ಮೇಘಾಲಯದಲ್ಲಿ, ನಾವು ಎನ್ಪಿಪಿಯೊಂದಿಗೆ ಯಾವುದೇ ಮೈತ್ರಿ ಮಾಡಿಕೊಂಡಿಲ್ಲ ಮತ್ತು 2018 ರಲ್ಲೂ ನಾವು ಮೈತ್ರಿ ಮಾಡಿಕೊಂಡಿರಲಿಲ್ಲ. ನಾವು ಸ್ವಂತವಾಗಿ ಹೋರಾಡುತ್ತಿದ್ದೇವೆ ಮತ್ತು ಅವರು ತಮ್ಮ ವೈಯಕ್ತಿಕ ಸಾಮರ್ಥ್ಯದ ಮೇಲೆ ಹೋರಾಡುತ್ತಿದ್ದಾರೆ. ಎನ್‌ಪಿಪಿ ಕಳೆದ ಐದು ವರ್ಷಗಳಿಂದ ದೊಡ್ಡ ಪ್ರಮಾಣದ ಭ್ರಷ್ಟಾಚಾರದಲ್ಲಿ ತೊಡಗಿದೆ ಮತ್ತು ನಮ್ಮ ಪಕ್ಷವು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆಯ ನಿಲುವನ್ನು ತೆಗೆದುಕೊಂಡಿದೆ ಎಂದರು.
ಆದರೆ ನೀವು ಸಹ ಎನ್‌ಪಿಪಿ ನೇತೃತ್ವದ ಸರ್ಕಾರದ ಭಾಗವಾಗಿದ್ದೀರಿ ಅಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು, ನಾವು ಎಂಡಿಎ ಸರ್ಕಾರದಲ್ಲಿ ಇದ್ದೇವೆ. ಆದರೆ ಬಿಜೆಪಿ ಕೇವಲ ಇಬ್ಬರು ಶಾಸಕರು ಮತ್ತು ಒಬ್ಬ ಸಚಿವರನ್ನು ಹೊಂದಿದ್ದು, ನಮಗೆ ಯಾವುದೇ ಪ್ರಮುಖ ಖಾತೆ ಇರಲಿಲ್ಲ. ಕಳೆದ ಐದು ವರ್ಷಗಳಲ್ಲಿ ಹೆಚ್ಚಿನ ಭ್ರಷ್ಟಾಚಾರಗಳು ನಡೆದ ಇಲಾಖೆಗಳ ಅಧಿಕಾರ ಎನ್‌ಪಿಪಿ ಅಥವಾ ಅವರ ಮೈತ್ರಿ ಪಾಲುದಾರ ಯುಡಿಪಿ ಬಳಿ ಇದೆ ಎಂದು ಹೇಳಿದರು.
ಮೇಘಾಲಯದಂಥ ರಾಜ್ಯದಲ್ಲಿ ಕನಿಷ್ಠ 90 ಪ್ರತಿಶತದಷ್ಟು ಜನರು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಾರೆ. ಜನರು ಗೋಮಾಂಸ ನಿಷೇಧ, ಸಿಎಎ ಮತ್ತು ಇತರ ವಿಷಯಗಳಲ್ಲಿ ಬಿಜೆಪಿಯ ಕಠಿಣ ನಿಲುವುಗಳನ್ನು ಒಪ್ಪಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ನೀವು ನಂಬುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾವ್ರಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಒಂಬತ್ತು ವರ್ಷಗಳಾಗಿದ್ದು, ಯಾವುದೇ ಚರ್ಚ್ ದಾಳಿಗೆ ಒಳಗಾಗಿಲ್ಲ. ಗೋಮಾಂಸ ಸೇವನೆಗೂ ಯಾವುದೇ ನಿರ್ಬಂಧವಿಲ್ಲ. ನಾನು ಗೋಮಾಂಸ ತಿನ್ನುತ್ತೇನೆ ಮತ್ತು ನಾನು ಬಿಜೆಪಿಯಲ್ಲಿದ್ದೇನೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಮೇಘಾಲಯದ ಜನತೆ ಈ ಬಾರಿ ಬಿಜೆಪಿ ಜೊತೆಗಿದ್ದಾರೆ ಎಂದು ನಾನು ನಿಮಗೆ ಭರವಸೆ ನೀಡುತ್ತಿದ್ದೇನೆ. ನೀವು ಅದನ್ನು ಮಾರ್ಚ್ 2 ರಂದು ನೋಡಲಿದ್ದೀರಿ ಎಂದರು.
ಇದನ್ನೂ ಓದಿ: ಫೆಬ್ರವರಿ 16 ರಂದು ತ್ರಿಪುರಾ, ಫೆಬ್ರವರಿ 27 ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ