ಜೈಪುರ(ರಾಜಸ್ಥಾನ): ಜೈಪುರ ಪ್ರವಾಸದಲ್ಲಿರುವ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಸುದ್ದಿಗಾರರರೊಂದಿಗೆ ಮಾತನಾಡಿದ್ದು, ತಾವು ಜಾತ್ಯತೀತ ವ್ಯಕ್ತಿಯಾಗಿದ್ದು, ರಾಮ ಮಂದಿರಕ್ಕೆ ದೇಣಿಗೆ ನೀಡುವುದಾಗಿ ಹೇಳಿದ್ದಾರೆ.
ಸುದ್ದಿಗಾರರು ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಅವರು, ಕೋವಿಡ್-19 ಮಹಾಮಾರಿ ಬಳಿಕ ಇದು ತಮ್ಮ ಮೊದಲ ಧಾರ್ಮಿಕ ಪ್ರವಾಸವಾಗಿದ್ದು, ಮಸೀದಿ ಅಥವಾ ಚರ್ಚ್ ಆಗಿರಲಿ, ಇತರ ಧಾರ್ಮಿಕ ಸ್ಥಳಗಳಲ್ಲಿಯೂ ನಾನು ಪ್ರಾರ್ಥನೆ ಸಲ್ಲಿಸುತ್ತೇನೆ. ನಾನು ಜಾತ್ಯತೀತ ವ್ಯಕ್ತಿಯಾಗಿದ್ದೇನೆ ಮತ್ತು ದೇಶದ ಜನರು ಶಾಂತಿಯಿಂದ ವಾಸಿಸಬೇಕೆಂದು ಬಯಸುತ್ತೇನೆ ಎಂದಿದ್ದಾರೆ.
ಇದೇ ವೇಳೆ, ದೇಶದಲ್ಲಿ ತೈಲ ಬೆಲೆ ಏರಿಕೆ ಮತ್ತು ಕೇಂದ್ರ ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆ ಬಗ್ಗೆ ಉತ್ತರಿಸಿದ ಅವರು, ದೇಶ ಬಹಳಷ್ಟು ಸಮಸ್ಯೆ ಎದುರಿಸುತ್ತಿದೆ. ರೈತರು ಕಳೆದ ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಇಲ್ಲಿಯವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸಾಮಾನ್ಯ ಜನರ ಹಿತಾಸಕ್ತಿಗೋಸ್ಕರ ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಕಡಿತಗೊಳಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ತಾರನ್ತರನ್, ದಾನಾ ಮಂಡಿಯಲ್ಲಿ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಮಹಾಪಂಚಾಯತ್ ರ‍್ಯಾಲಿ
ವಜ್ರದ ಉದ್ಯಮಿ ನೀರವ್ ಮೋದಿಯನ್ನ ಭಾರತಕ್ಕೆ ಹಸ್ತಾಂತರ ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ದೃಢವಾದ ನಂಬಿಕೆ ಇದೆ ಎಂದಿದ್ದಾರೆ. ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬಿಜೆಪಿ ಸರ್ಕಾರದ ವಿರುದ್ಧ ಹೋರಾಡುತ್ತಿದ್ದು, ಪ್ರತಿಪಕ್ಷಗಳಿಗೆ ಸ್ಥಳೀಯರಿಂದ ಬೆಂಬಲ ಸಿಗುತ್ತದೆ. ಮತ್ತು ಸರ್ಕಾರದ ದಬ್ಬಾಳಿಕೆಯ ನೀತಿಗಳಿಂದ ಜನರು ಆಕ್ರೋಶಗೊಂಡಿದ್ದಾರೆ ಎಂದಿದ್ದಾರೆ.