ಹೈದರಾಬಾದ್(ತೆಲಂಗಾಣ): ಪತಿಯ ವರ್ತನೆಯಿಂದ ಮನನೊಂದ ಮಹಿಳೆಯೊಬ್ಬಳು ಮಕ್ಕಳನ್ನು ಕರೆದುಕೊಂಡು ತವರು ಮನೆ ಸೇರಿದ್ದಾಳೆ. ಆಕೆಯನ್ನು ಕರೆತರಲು ಪ್ರಯತ್ನಿಸಿದ ಗಂಡನ ಕಾರ್ಯ ಫಲ ನೀಡಿರಲಿಲ್ಲ. ಆತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ಸಹಾಯ ಸಿಗಲಿಲ್ಲ. ಇದರಿಂದ ಕೋಪಗೊಂಡು ನಗರದಲ್ಲಿ ಬಾಂಬ್ ಇದೆ ಎಂದು ಪೊಲೀಸರಿಗೆ ಸುಳ್ಳು ಸುದ್ದಿ ತಲುಪಿಸಿದ್ದಾನೆ.
ಪೊಲೀಸರು ನೀಡಿದ ಮಾಹಿತಿಯಂತೆ, ಮಂಗಳವಾರ-ಬುಧವಾರ ರಾತ್ರಿ ಸೈದಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಚಂದ್ರಯ್ಯನಗುಟ್ಟ ರಿಯಾಸತ್‌ನಗರ ವಿಭಾಗದ ರಾಜನರಸಿಂಹನಗರದ ಮೊಹಮ್ಮದ್ ಅಕ್ಬರ್ ಖಾನ್ ಎಂಬಾತ ಕುಡಿತದ ಚಟಕ್ಕೆ ದಾಸನಾಗಿದ್ದ. ಆಗಾಗ ದಂಪತಿಯ ನಡುವೆ ಜಗಳ ನಡೆಯುತ್ತಿತ್ತು. ಇತ್ತೀಚೆಗಷ್ಟೇ ಹೆಂಡತಿ ತಮ್ಮ ಮಕ್ಕಳನ್ನು ಕರೆದುಕೊಂಡು ತವರುಮನೆಗೆ ಹೋಗಿದ್ದಳು. ಪತ್ನಿಯ ಕುಟುಂಬಸ್ಥರಿಗೆ ನಿಮ್ಮ ಮಗಳನ್ನು ಕಳುಹಿಸಿಕೊಡುವಂತೆ ಹಲವು ಬಾರಿ ಮನವಿ ಮಾಡಿದರೂ ಮತ್ತು ಚೌಟುಪ್ಪಲ ಪೊಲೀಸರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಆತ ನೊಂದಿದ್ದನಂತೆ.
ಮಂಗಳವಾರ ರಾತ್ರಿ ಇಸ್ಸಾದನ್ ಛೇದನದಲ್ಲಿರುವ ಮಂದಿರ-ಮಸೀದಿಯಲ್ಲಿ ಬಾಂಬ್ ಇದೆ ಎಂದು 100 ಗೆ ಕರೆ ಮಾಡಿದ್ದಾನೆ. ಬಾಂಬ್ ಸ್ಕ್ವಾಡ್ ಮತ್ತು ಶ್ವಾನದಳ ಬಂದು ಮಧ್ಯರಾತ್ರಿ ಶೋಧ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ಕಾಲ್ ಟ್ರ್ಯಾಕ್ ಮೂಲಕ ಕರೆ ಮಾಡಿದವರನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬುಧವಾರ ನಾಂಪಲ್ಲಿ 7ನೇ ವಿಶೇಷ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದ ನ್ಯಾಯಾಧೀಶ ಲಕ್ಷ್ಮಣ್ ರಾವ್, ಆರೋಪಿಗೆ 18 ದಿನ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಇದನ್ನೂ ಓದಿ: ರಾಯಗಡ ನದಿ ಪಾತ್ರದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ: ಮುಂದುವರೆದ ತನಿಖೆ