ಹೈದರಾಬಾದ್: ಪೇಮೆಂಟ್ ಗೇಟ್‌ವೇ ಪ್ಲಾಟ್‌ಫಾರ್ಮ್‌ನ ಡೇಟಾಬೇಸ್ ಸರ್ವರ್ ಹ್ಯಾಕ್ ಮಾಡಿ 52.9 ಲಕ್ಷ ರೂಪಾಯಿ ವಂಚಿಸಿದ ವ್ಯಕ್ತಿಯನ್ನು ತೆಲಂಗಾಣ ಪೊಲೀಸರು ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 28 ವರ್ಷದ ಯುವಕನನ್ನು ಎಥಿಕಲ್ ಹ್ಯಾಕರ್ ಸಹಾಯದಿಂದ ಪತ್ತೆಹಚ್ಚಿದ ಪೊಲೀಸರು, ಆರೋಪಿಯನ್ನು ವಿಜಯವಾಡದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಈ ವಿಷಯವನ್ನು ದೃಢಪಡಿಸಿದ್ದಾರೆ.
ಆರೋಪಿ ಮೊದಲಿಗೆ ಪೇಮೆಂಟ್ ಗೇಟ್‌ವೇಗಳ ಸಾಫ್ಟ್‌ವೇರ್‌ನಲ್ಲಿ ದೋಷಗಳನ್ನು ಗುರುತಿಸುತ್ತಿದ್ದ. ಇದಕ್ಕಾಗಿಯೇ ಹೊಸ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದ ಖದೀಮ, ಪೇಮೆಂಟ್ ಗೇಟ್‌ವೇ ವ್ಯವಹಾರದ ನಡುವಣ ಅಂತರವನ್ನು ಬಳಸಿಕೊಂಡು, ಕೋರ್ ಸರ್ವರ್‌ಗಳನ್ನು ಹ್ಯಾಕ್ ಮಾಡಿ ಹಣವನ್ನು ಬೇರೆಡೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ಪ್ರಕರಣ ಬಯಲಾಗಿದ್ದು ಹೇಗೆ?: ಪೇಮೆಂಟ್ ಗೇಟ್‌ವೇ ಪ್ಲಾಟ್‌ಫಾರ್ಮ್ ನೀಡುವ ಸಾಫ್ಟ್‌ವೇರ್ ಸಂಸ್ಥೆಯ ಉದ್ಯೋಗಿಯೊಬ್ಬರು ತಮ್ಮ ಖಾತೆಯನ್ನು ಮಾರ್ಚ್ 15 ರಂದು ಹ್ಯಾಕ್ ಮಾಡಲಾಗಿದೆ. ಅಷ್ಟೇ ಅಲ್ಲ ಅದರಲ್ಲಿದ್ದ 52.9 ಲಕ್ಷ ರೂ.ಗಳನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದು ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಹ್ಯಾಕರ್ಗಾಗಿ ಬಲೆ ಬೀಸಿದ್ದರು. ಇದಕ್ಕೆ ಎಥಿಕಲ್ ಹ್ಯಾಕರ್ಗಳ ಸಹಾಯ ಪಡೆದಿದ್ದ ಪೊಲೀಸರು, ಕಿಲಾಡಿ ಹ್ಯಾಕರ್ನನ್ನು ಬಲೆಗೆ ಕೆಡುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ, ಆರೋಪಿಯು ನಕಲಿ ಯೂಸರ್ ಐಡಿಯನ್ನು ಬಳಸಿಕೊಂಡು ವ್ಯಾಪಾರಿಯ ವೇಷ ಧರಿಸಿ ಪಾವತಿ ಗೇಟ್‌ವೇ ಪ್ರವೇಶಿಸಿದ್ದ. ಪಾವತಿ ಗೇಟ್‌ವೇಯ ದೋಷಗಳನ್ನು ಮೌಲ್ಯಮಾಪನ ಮಾಡಲು ಓಪನ್ ಸೋರ್ಸ್ ಸಾಫ್ಟ್‌ವೇರ್ ಉಪಕರಣಗಳನ್ನು ಬಳಸಿಕೊಂಡಿದ್ದ ಮತ್ತು ಪಾವತಿ ಗೇಟ್‌ವೇಯ ಸೂಪರ್ ಅಡ್ಮಿನ್ ಬಳಕೆದಾರ ಐಡಿಯನ್ನು ಹೇಗೋ ಸಂಪಾದಿಸಿದ್ದ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಡೇಟಾಬೇಸ್ ದೌರ್ಬಲ್ಯ ಉಪಯೋಗಿಸಿ ಹ್ಯಾಕ್: ಪಾವತಿ ಗೇಟ್‌ವೇ ಸಾಫ್ಟ್‌ವೇರ್‌ನಲ್ಲಿ ಅಸ್ತಿತ್ವದಲ್ಲಿರುವ ದುರ್ಬಲತೆಗಳನ್ನು ಬಳಸಿಕೊಂಡು ಆರೋಪಿ, ಮುಖ್ಯ ಡೇಟಾಬೇಸ್ ಸರ್ವರ್ ಪ್ರವೇಶ ಪಡೆದುಕೊಂಡಿದ್ದ. ಡೇಟಾ ಸರ್ವರ್‌ಗೆ ಪ್ರವೇಶಿಸಿದ ನಂತರ, ಅವರು ಪಾವತಿ ಗೇಟ್‌ವೇನ ನೋಡಲ್ ಖಾತೆಯಿಂದ 52.9 ಲಕ್ಷ ರೂಪಾಯಿಗಳನ್ನು ಮೂರು ವರ್ಚುಯಲ್ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದ.
ಹೀಗೆ ವರ್ಗಾವಣೆ ಮಾಡಿಕೊಂಡಿದ್ದ ಹಣದಿಂದ ಆರೋಪಿ, ಬಿಟ್‌ಕಾಯಿನ್‌ಗಳನ್ನು ಖರೀದಿಸಿದ್ದ. ಅಷ್ಟೇ ಏಕೆ ಹೀಗೆ ಖರೀದಿ ಮಾಡಿದ್ದ ಬಿಟ್‌ಕಾಯಿನ್‌ಗಳನ್ನು ಮತ್ತೊಂದು ಕ್ರಿಪ್ಟೋ ಖಾತೆಗೆ ವರ್ಗಾಯಿಸಿಕೊಳ್ಳುವಲ್ಲೂ ಖದೀಮ ಯಶಸ್ವಿಯಾಗಿದ್ದ. ಇನ್ನೂ ಮುಂದುವರಿದು ಆ ಬಿಟ್ ಕಾಯಿನ್ಗಳನ್ನು ಮಾರಾಟ ಮಾಡಿ ಎನ್ಕ್ಯಾಶ ಸಹ ಮಾಡಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:ಮದುವೆ ಮಂಟಪದಲ್ಲೇ ಕುಸಿದುಬಿದ್ದ ವಧು.. ಆಸ್ಪತ್ರೆಗೆ ಕರೆದೊಯ್ದರೂ ಬದುಕಲಿಲ್ಲ ಯುವತಿ