ದೊರ್ನಿಪಾಡು(ಆಂಧ್ರ ಪ್ರದೇಶ): ನಂದ್ಯಾಲ ಜಿಲ್ಲೆಯ ದೊರ್ನಿಪಾಡು ಮಂಡಲದ ಯುವಕನೊಬ್ಬ ಮೂವರು ಯುವತಿಯರನ್ನು ಮದುವೆಯಾಗಿ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕೃತ್ಯದಲ್ಲಿ ತಾಯಿಯೂ ಮಗನಿಗೆ ಸಾಥ್ ನೀಡಿರುವುದಾಗಿ ದೊರ್ನಿಪಾಡು ಪೊಲೀಸ್ ಠಾಣಾ ಎಸ್‌ಐ ತಿರುಪಾಲ್ ಗುರುವಾರ ತಿಳಿಸಿದ್ದಾರೆ.
ಆರೋಪಿ ಚಾಕರಾಜುವೆಮುಲ ಗ್ರಾಮದ ಮಹೇಂದ್ರ ಬಾಬು ಮಾರ್ಕಾಪುರದ ಮಹಿಳೆಯನ್ನು ವಿವಾಹವಾಗಿದ್ದನು. ತನಗೆ ಮದುವೆಯಾಗಿರುವ ವಿಷಯವನ್ನು ಮುಚ್ಚಿಟ್ಟು, ತನ್ನ ಗ್ರಾಮದ ಮತ್ತೊಬ್ಬ ಮಹಿಳೆಯನ್ನು ಪ್ರೀತಿಸಿ ನಾಲ್ಕು ವರ್ಷಗಳ ಹಿಂದೆ ಎರಡನೇ ಮದುವೆಯಾಗಿದ್ದಾನೆ. ಎರಡನೇ ಪತ್ನಿ ಆತ್ಮಹತ್ಯೆ ಮಾಡಿಕೊಂಡರೆ ಆಕೆಗೆ ಸಂಬಂಧಿಸಿದ ವಿಮೆ ಹಣ ಬರುತ್ತದೆ ಎಂದು ತಾಯಿ ಬಳಿ ಚರ್ಚಿಸಿದ್ದಾನೆ. ನಂತರ ತಾಯಿ ಹಾಗೂ ಮಗ ಸೇರಿಕೊಂಡು ಎರಡನೇ ಹೆಂಡತಿಯನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಇದರಿಂದ ಮನನೊಂದು ಆಕೆ ಹೈದರಾಬಾದ್ಗೆ ಹೊರಟು ಹೋಗಿದ್ದಳು.
ಇದಾದ ಮೂರು ವರ್ಷಗಳ ನಂತರ ಮಹೇಂದ್ರ ಬಾಬು ಕೃಷ್ಣಾ ಜಿಲ್ಲೆಯ ಚಲ್ಲಪಲ್ಲಿ ಮಂಡಲದ ವಕ್ಕಲಗಡ್ಡ ಗ್ರಾಮದ ಮತ್ತೊಬ್ಬ ಮಹಿಳೆಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾನೆ. ತಾನು ಅವಿವಾಹಿತನೆಂದು ನಂಬಿಸಿ ಆಕೆಯನ್ನೂ ಮದುವೆಯಾಗಿದ್ದಾನೆ. ಅಷ್ಟೇ ಅಲ್ಲದೆ ಆಕೆಯ ತಾಯಿಯ ಮೊಬೈಲ್ ಮೂಲಕ ಆಕೆಯಿಂದ ರೂ.5 ಲಕ್ಷ ಹಾಗೂ ಖಾಸಗಿ ಸಾಲದ ಆ್ಯಪ್ನಿಂದ ರೂ.5 ಲಕ್ಷ ಸಾಲ ಪಡೆದಿದ್ದಾನೆ.
ಇದೀಗ ಆರೋಪಿ ಮಹೇಂದ್ರ ಬಾಬು ಮೂರನೇ ಮದುವೆಯಾಗಿರುವ ವಿಷಯ ತಿಳಿದ ಎರಡನೇ ಪತ್ನಿ ಆತನ ಹಾಗೂ ಆತನ ತಾಯಿ ವಿರುದ್ಧ ದೊರ್ನಿಪಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಪತಿಯ ಅಕ್ರಮ ಸಂಬಂಧ: ಮದುವೆಯಾದ 11 ತಿಂಗಳಿಗೆ ಪತ್ನಿ ಆತ್ಮಹತ್ಯೆ