ಹಜಾರಿಬಾಗ್: ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು, ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಕೊರೊನಾ ಮಹಾಮಾರಿ ಸೋಂಕು ಏಳು ದಿನಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತನನ್ನು ಬಲಿ ಪಡೆದಿದೆ.
ಜಿಲ್ಲೆಯ ಝರ್ಪೈ ಗ್ರಾಮದ ನಿವಾಸಿ ಕೈಲೇಶ್ವರ್ ಮಹತೊ ಪುತ್ರಿ ಪ್ರಿಯಾಂಕಾ ಮದುವೆ ಏಪ್ರಿಲ್ 28ರಂದು ಹಜಾರಿಬಾಗ್ ಹುಟ್ಪಾ ನಿವಾಸಿ ಅನಿಲ್ ಮಹತೊ ಜೊತೆ ನಡೆದಿತ್ತು. ಪ್ರಿಯಾಂಕಾ ನೂರೊಂದು ಕನಸುಗಳನ್ನು ಹೊತ್ತುಕೊಂಡು ಗಂಡ ಅನಿಲ್ ಮನೆಗೆ ತೆರಳಿದ್ದಳು. ಆದ್ರೆ ಮದುವೆಯಾಗಿ ಏಳೇ ದಿನಕ್ಕೆ ಅನಿಲ್ ಕೊರೊನಾದಿಂದ ಮೃತಪಟ್ಟಿದ್ದಾನೆ.
ಮದುವೆಗೂ ಮುನ್ನ ಅನಿಲ್ಗೆ ಕೊರೊನಾ ಲಕ್ಷಣಗಳಿದ್ದವು. ಆದ್ರೆ ಮದುವೆ ಹತ್ತಿರ ಬಂದ ಹಿನ್ನೆಲೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾನೆ ಎನ್ನಲಾಗಿದೆ. ಮದುವೆ ಮಾಡಿಕೊಂಡ ಬಳಿಕ ದಿನದಿಂದ ದಿನಕ್ಕೆ ಆರೋಗ್ಯ ಕ್ಷೀಣಸುತ್ತಲೇ ಇದ್ದಾಗ ಆಸ್ಪತ್ರೆಗೆ ದಾಖಲಾಗಿದ್ದಾನೆ. ಚಿಕಿತ್ಸೆ ಫಲಿಸದೇ ಗುರುವಾರ ಅನಿಲ್ ಕೊರೊನಾಗೆ ಬಲಿಯಾಗಿದ್ದಾನೆ.
ಒಂದು ಸಣ್ಣ ತಪ್ಪಿನಿಂದ ಒಂದು ಹೆಣ್ಣಿನ ಜೀವನ ಹಾಳಾದಂತಾಗಿದೆ. ನವವಿವಾಹಿತೆಯ ನೂರೊಂದು ಕನಸಿಗೆ ವಿಧಿ ವಿರಾಮ ಇಟ್ಟಿದೆ.
ಈಟಿವಿ ಭಾರತ ಮನವಿ...
ಎಷ್ಟೋ ಘಟನೆಗಳು ನಮಗೆ ಪಾಠ ಕಲಿಸುತ್ತಿವೆ. ಕೋವಿಡ್ನಿಂದಾಗಿ ಅನೇಕರು ಅಕಾಲಿಕ ಮರಣ ಹೊಂದುತ್ತಿದ್ದಾರೆ. ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ. ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಮುಖ್ಯ. ಅನಗತ್ಯವಾಗಿ ಹೊರಗಡೆ ಬಂದು ಮತ್ತು ನಿರ್ಲಕ್ಷ್ಯ ತೋರುವುದರಿಂದ ಅಮೂಲ್ಯವಾದ ಪ್ರಾಣ ಕಳೆದುಕೊಳ್ಳುವ ಸಂಭವವಿರುತ್ತೆ. ಅಷ್ಟೇ ಅಲ್ಲ ನಿಮ್ಮನ್ನು ನಂಬಿ ಜೀವನ ಮಾಡುತ್ತಿರುವ ಕುಟುಂಬಸ್ಥರು ಸಹ ಬೀದಿಗೆ ಬರುವ ಸ್ಥಿತಿ ಎದುರಾಗಬಹುದು. ಹೀಗಾಗಿ ಕೊರೊನಾ ಬಗ್ಗೆ ಜಾಗೃತರಾಗಿರಿ.