ಲಖನೌ (ಉತ್ತರ ಪ್ರದೇಶ) : ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಉತ್ತರ ಪ್ರದೇಶದ ಲಖನೌ ಜಿಲ್ಲೆಯ ಠಾಕೂರ್‌ಗಂಜ್ ಪ್ರದೇಶದಲ್ಲಿ ಪತ್ನಿಯನ್ನು ಹತ್ಯೆ ಮಾಡಿರುವ ಪಾಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆನಂದೇಶ್ವರ್ ಬಂಧಿತ ಆರೋಪಿ.
ಠಾಕೂರ್‌ಗಂಜ್ ಪ್ರದೇಶದ ನಿವಾಸಿಯಾದ ಆರೋಪಿ ಆನಂದೇಶ್ವರ್ ವೃತ್ತಿಯಲ್ಲಿ ಫಿಸಿಯೋಥೆರಪಿಸ್ಟ್ ಆಗಿದ್ದು, 15 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯಾದ ನಂತರ ಪತಿ - ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆರೋಪಿ ಪತಿ ಆನಂದೇಶ್ವರ್ ಕುಡಿತದ ಚಟಕ್ಕೆ ದಾಸನಾಗಿದ್ದ. ಹೀಗೆ ಮುಂದುವರಿದು ಡಿಸೆಂಬರ್ 5 ರಂದು ಮಂಗಳವಾರ ಪತ್ನಿ ಮೇಲೆ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ ಆನಂದೇಶ್ವರ್ ಮತ್ತೆ ಜಗಳ ಆರಂಭಿಸಿದ್ದನು. ಅಲ್ಲದೇ, ಪತ್ನಿಗೆ ಮನಬಂದಂತೆ ಹಲ್ಲೆ ಮಾಡಿದ್ದನು.
ಬಳಿಕ ಕೋಪ ತಾರಕ್ಕೇರಿ ಪತ್ನಿಯ ಕೈ-ಕಾಲು ಕಟ್ಟಿ ಹಾಕಿ ಅಡುಗೆ ಮನೆಯಲ್ಲಿಟ್ಟಿದ್ದ ಆರೋಪಿ ಚಾಕುವಿನಿಂದ 18 ಬಾರಿ ಅಮಾನುಷವಾಗಿ ಇರಿದು ಹತ್ಯೆ ಮಾಡಿದ್ದನು. ಕೊಲೆಯ ನಂತರ ತನ್ನ ಕಿರಿಯ ಮಗನ ಜೊತೆ ಶಾಲೆಯಿಂದ ಬಂದಾಗ ಮಕ್ಕಳಿಬ್ಬರಿಗೂ ನಿದ್ರೆ ಮಾತ್ರೆ ನೀಡಿದ್ದನು. ಪ್ರಜ್ಞೆ ಬಂದ ನಂತರ ಮಕ್ಕಳು ಘಟನೆಯ ಬಗ್ಗೆ ಅಜ್ಜಿಗೆ ತಿಳಿಸಿದ್ದಾರೆ.
ಇನ್ನೊಂದೆಡೆ ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿದ ಬಳಿಕ ಆರೋಪಿ ಸಿಕ್ಕಿಬೀಳುವ ಭೀತಿಯಿಂದ ಮನೆಯಲ್ಲಿ ಅಳವಡಿಸಿದ್ದ ಕ್ಯಾಮೆರಾದ ಡಿಬಿಆರ್ ತೆಗೆದು ಲಖನೌದಿಂದ ಕೋಲ್ಕತ್ತಾ ಮತ್ತು ವಾರಾಣಸಿಯಲ್ಲಿ ತಲೆ ಮರೆಸಿಕೊಂಡಿದ್ದನು. ಈ ವೇಳೆ, ಫೋನ್ ಕಡಿಮೆ ಬಳಕೆ ಮಾಡುತ್ತಿದ್ದ ಆರೋಪಿ ಆಗಾಗ ಲೊಕೇಶನ್ ಬದಲಾಯಿಸುತ್ತಿದ್ದನು. ಡಿ. 18ರ ರಾತ್ರಿ ಆರೋಪಿ ಲಖನೌದಲ್ಲಿರುವ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದು, ಕೃಷ್ಣನಗರದ ಮೋಟಾರ್ ಟ್ರೈನಿಂಗ್ ಸ್ಕೂಲ್ ಬಳಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಕೊಲೆಗೆ ಬಳಸಿದ್ದ ಚಾಕುವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಾಹುಲ್ ರಾಜ್ ಮಾಹಿತಿ ನೀಡಿದ್ದಾರೆ.
ಪತ್ನಿ ಹತ್ಯೆ ಮಾಡಿ ಪತಿ ಆತ್ಮಹತ್ಯೆ : ಇತ್ತೀಚೆಗೆ ಹಳೆ ಹುಬ್ಬಳ್ಳಿಯ ಕಟಕರ ಓಣಿಯಲ್ಲಿ ಕೆಲಸಕ್ಕೆ ಹೋಗೆಂದ ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿ ಪತಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಮಲೀಕ್ ಬೇಪಾರಿ ಆತ್ಮಹತ್ಯೆಗೆ ಶರಣಾನಾದ ಪತಿ. ಶಾಹಿಸ್ತಾಬಾನು ಕೊಲೆ ಪತ್ನಿ. ಮಲೀಕ್ ಬೇರೆ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಮನೆ ನಡೆಸಲು ದುಡಿಮೆ ಮಾಡು ಎಂದು ಒತ್ತಾಯಿಸಿದ್ದೇ ಪತ್ನಿ ಕೊಲೆಗೆ ಕಾರಣವಂತೆ. ಏನಾದರೂ ದುಡಿದು ತಾ ಎಂದು ಪತ್ನಿ ಒತ್ತಾಯಿಸುತ್ತಿದ್ದರಂತೆ. ಇದೇ ಕಾರಣಕ್ಕಾಗಿ ಗಂಡ - ಹೆಂಡತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ಹೀಗಾಗಿ ಡಿ.9 ರಂದು ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದವು.
ಇದನ್ನೂ ಓದಿ : ತನ್ನ ಸಹಚರರೊಂದಿಗೆ ಗೆಳತಿ ಕೊಲೆ ಯತ್ನ ಪ್ರಕರಣ: ಹಿರಿಯ ಸರ್ಕಾರಿ ಅಧಿಕಾರಿಯ ಪುತ್ರ ಸೇರಿ ಮೂವರ ಬಂಧನ