ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನಂತರ ಕಾಂಗ್ರೆಸ್ ನಾಯಕ ರಘು ಶರ್ಮಾ ಎಐಸಿಸಿ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಇದುವರೆಗೆ ಕೇವಲ 16 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 2022 ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಚೊಚ್ಚಲ ಬಾರಿಗೆ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷವು (ಎಎಪಿ) ಸುಮಾರು ಶೇ 13 ಮತ ಪಡೆದಿದ್ದು, ಕಾಂಗ್ರೆಸ್ ಮತ ಗಳಿಕೆ ಪ್ರಮಾಣ ಕೇವಲ ಶೇ 27ಕ್ಕೆ ಕುಸಿದಿದೆ.
ಬೆಳಗ್ಗೆ ಮತಗಳ ಎಣಿಕೆ ಆರಂಭವಾದಾಗ ದಿನ ಕಳೆದಂತೆ ಕಾಂಗ್ರೆಸ್ ಪರವಾಗಿ ಆಶ್ಚರ್ಯಕರ ಫಲಿತಾಂಶಗಳು ಬರಲಿವೆ ಎಂದು ರಘು ಶರ್ಮಾ ಹೇಳಿದ್ದು, ಆಶಾಭಾವನೆ ವ್ಯಕ್ತಪಡಿಸಿದ್ದರು. ಆದರೆ ಮಧ್ಯಾಹ್ನವಾದಂತೆ ಕಾಂಗ್ರೆಸ್ ಕೇವಲ 16 ಸ್ಥಾನಗಳಿಗೆ ಸೀಮಿತವಾಗಿದ್ದು, 182 ಸ್ಥಾನಬಲದ ಗುಜರಾತ್ ವಿಧಾನಸಭೆಯಲ್ಲಿ ಹೀನಾಯ ಸ್ಥಿತಿಗೆ ಬಂದಿದೆ.
ಸದ್ಯ ಗುಜರಾತ್ ಎಐಸಿಸಿ ಉಸ್ತುವಾರಿ ಸ್ಥಾನಕ್ಕೆ ರಘು ಶರ್ಮಾ ರಾಜೀನಾಮೆ ನೀಡಿದ್ದು, ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ. ಶರ್ಮಾ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮ ಕೈಬರಹದ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅನಿರೀಕ್ಷಿತ ಸೋಲಿನ ಸಂಪೂರ್ಣ ನೈತಿಕ ಹೊಣೆ ಹೊತ್ತು ನಾನು ಗುಜರಾತ್ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷದ ಉಸ್ತುವಾರಿ ಸ್ಥಾನಕ್ಕೆ ನನ್ನ ರಾಜೀನಾಮೆಯನ್ನು ದಯವಿಟ್ಟು ಅಂಗೀಕರಿಸಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಆಪ್ ಸಿಎಂ ಅಭ್ಯರ್ಥಿ ಇಸುದನ್ ಗಧ್ವಿಗೆ ಸೋಲು.. ಗುಜರಾತ್ನಲ್ಲಿ ಆಪ್ಗೆ ಭಾರಿ ಮುಖಭಂಗ