ಗುಜರಾತ್: ಗುಜರಾತ್ನಲ್ಲಿ ಚುನಾವಣೆ ಸಮೀಪಸುತ್ತಿದ್ದಂತೆಯೇ ರಾಜಕೀಯ ಕಿತ್ತಾಟಗಳೂ ಶುರುವಾಗಿವೆ. ಕಾಂಗ್ರೆಸ್ ಶಾಸಕ, ಬುಡಕಟ್ಟು ಸಮುದಾಯದ ಮುಖಂಡರೊಬ್ಬರಿಗೆ ಅಪರಿಚಿತರು ಥಳಿಸಿರುವುದನ್ನು ಖಂಡಿಸಿ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ. ಈ ವೇಳೆ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ದಳ ವಾಹನವನ್ನೂ ಪ್ರತಿಭಟನಾಕಾರರು ಪುಡಿಗಟ್ಟಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ನಿನ್ನೆ ಕಾಂಗ್ರೆಸ್ ಶಾಸಕ, ಬುಡಕಟ್ಟು ಜನಾಂಗದ ಮುಖಂಡ ಅನಂತ್ ಪಟೇಲ್ ಎಂಬುವರ ಮೇಲೆ ಹಲ್ಲೆ ನಡೆದಿದೆ. ಇದಕ್ಕೆ ಕಾರಣ ಬಿಜೆಪಿಗರು ಎಂದು ಆರೋಪಿಸಲಾಗಿದೆ. ಹಲ್ಲೆಯಲ್ಲಿ ಶಾಸಕರು ಗಾಯಗೊಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ಜಮಾಯಿಸಿದ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಕಾವು ರಾತ್ರಿ ಕಳೆದರೂ ಇಳಿಯಲಿಲ್ಲ. ಆಕ್ರೋಶಿತ ಪ್ರತಿಭಟನಾಕಾರರು ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಬಳಿಕ ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ವಾಹನವನ್ನೂ ತಡೆದಿದ್ದಾರೆ. ಇನ್ನು ಕೆಲವರು ಉದ್ವೇಗದಲ್ಲಿ ಬೆಂಕಿ ನಂದಿಸುವ ವಾಹನವನ್ನೇ ಹಾಳು ಮಾಡಿದ್ದಾರೆ.
ಬಿಜೆಪಿ ಆಡಳಿತದಲ್ಲಿ ದೌರ್ಜನ್ಯ: ಇನ್ನು ಘಟನೆಯ ಬಗ್ಗೆ ಮಾತನಾಡಿದ ಹಲ್ಲೆಗೊಳಗಾದ ಕಾಂಗ್ರೆಸ್ ಶಾಸಕ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪ್ರತಿಪಕ್ಷಗಳ ನಾಯಕರಿಗೆ ಭದ್ರತೆ ಇಲ್ಲವಾಗಿದೆ. ಬಿಜೆಪಿಯ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅವರನ್ನು ಬಂಧಿಸುವವರೆಗೂ ಪ್ರತಿಭಟನೆ ನಡೆಸಲಾಗುತ್ತದೆ. ಅಲ್ಲಿಯವರೆಗೆ 14 ಜಿಲ್ಲೆಗಳ ಹೆದ್ದಾರಿಗಳನ್ನು ಆದಿವಾಸಿಗಳು ಬಂದ್ ಮಾಡಲಿದ್ದಾರೆ. ಬಿಜೆಪಿಗರ ವಿರುದ್ಧ ಧ್ವನಿ ಎತ್ತಿದರೆ ಅವರ ಮೇಲೆ ಹಲ್ಲೆ ನಡೆಸಿ, ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದರು.
ಪೊಲೀಸ್ ಬಿಗಿ ಬಂದೋಬಸ್ತ್: ಶಾಸಕರ ಮೇಲಿನ ಹಲ್ಲೆ ವಿರೋಧಿಸಿ ನಡೆದ ಪ್ರತಿಭಟನೆ ತೀವ್ರ ಕಾವು ಪಡೆದ ಕಾರಣ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ರಾತ್ರಿ ಪೂರ್ತಿ ಕಾವಲು ಕಾಯಲಾಗಿದೆ.
4-5 ಜನರು ಶಾಸಕ ಅನಂತ್ ಪಟೇಲ್ ಮೇಲೆ ಹಲ್ಲೆ ನಡೆಸಿದ್ದಾರೆ. 3 ದಿನದೊಳಗೆ ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ನಿಯಮಾನುಸಾರವಾಗಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ: ಪಿಎಫ್ಐ ಮಾದರಿಯಲ್ಲೇ ಆರ್ಎಸ್ಎಸ್ ನಿಷೇಧಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಸಿದ್ಧತೆ