ನವದೆಹಲಿ : ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಪೂರ್ವ ವಲಯದಲ್ಲಿ ಹೊಸ ಹಾಟ್‌ಲೈನ್ ಅನ್ನು ಸ್ಥಾಪಿಸಿದ್ದು, ಎರಡೂ ಕಡೆಯ ಸ್ಥಳೀಯ ಕಮಾಂಡರ್‌ಗಳು ನೇರವಾಗಿ ಮಾತನಾಡಲು ಮತ್ತು ನೆಲದ ಮೇಲಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಸಿಕ್ಕಿಂನ ಕೊಂಗ್ರಾಲಾದಲ್ಲಿ ಭಾರತೀಯ ಸೇನೆಯ ಕಮಾಂಡರ್‌ಗಳು ಮತ್ತು ಟಿಬೆಟಿಯನ್ ಸ್ವಾಯತ್ತ ಪ್ರದೇಶದ ಖಂಬಾ ಜೋಂಗ್‌ನಲ್ಲಿರುವ ಪಿಎಲ್‌ಎ ನಡುವೆ ಹಾಟ್‌ಲೈನ್ ಸ್ಥಾಪಿಸಲಾಗಿದೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಲಡಾಖ್ ಸೆಕ್ಟರ್‌ನಲ್ಲಿ 12ನೇ ಸುತ್ತಿನ ಮಾತುಕತೆ ನಡೆಸಿದ ಒಂದು ದಿನದ ನಂತರ ಈ ಬೆಳವಣಿಗೆ ಕಂಡು ಬಂದಿದೆ.
ಎರಡು ಸೇನೆಗಳ ನಡುವಿನ ಸ್ಥಳೀಯ ಕಮಾಂಡರ್‌ಗಳಿಗೆ ಇದು ಆರನೇ ಹಾಟ್‌ಲೈನ್ ಆಗಿದೆ - ಪೂರ್ವ ಲಡಾಖ್‌ನಲ್ಲಿ ಎರಡು, ಅರುಣಾಚಲ ಪ್ರದೇಶದಲ್ಲಿ ಎರಡು ಮತ್ತು ಸಿಕ್ಕಿಂನಲ್ಲಿ ಎರಡು ಹಾಟ್‌ಲೈನ್ ಸ್ಥಾಪನೆ ಮಾಡಲಾಗಿದೆ.
ಗಡಿಯುದ್ದಕ್ಕೂ ನಂಬಿಕೆ ಮತ್ತು ಸೌಹಾರ್ದಯುತ ಸಂಬಂಧವನ್ನು ಹೆಚ್ಚಿಸಲು ಹಾಟ್‌ಲೈನ್ ಅನ್ನು ಸ್ಥಾಪಿಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಕಾರ್ಯಕ್ರಮ ಉದ್ಘಾಟನೆಯಲ್ಲಿ ಆಯಾ ಸೇನೆಗಳ ನೆಲದ ಕಮಾಂಡರ್‌ಗಳು ಭಾಗವಹಿಸಿದ್ದರು ಮತ್ತು ಸ್ನೇಹ ಮತ್ತು ಸಾಮರಸ್ಯದ ಸಂದೇಶವನ್ನು ಹಾಟ್‌ಲೈನ್ ಮೂಲಕ ವಿನಿಮಯ ಮಾಡಿಕೊಳ್ಳಲಾಯಿತು.