ಜೈಪುರ: ಭಾರತೀಯ ಸೇನೆಯ ಬಗ್ಗೆ ಗೌಪ್ಯ ಮತ್ತು ಕಾರ್ಯತಂತ್ರದ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಪಾಕಿಸ್ತಾನದ ಐಎಸ್‌ಐನ ಏಜೆಂಟರಿಂದ ಹನಿ ಟ್ರ್ಯಾಪ್ಗೆ ಒಳಗಾಗಿದ್ದ ಸೈನಿಕನನ್ನು ರಾಜಸ್ಥಾನ ಪೊಲೀಸರ ಗುಪ್ತಚರ ಘಟಕ ಶನಿವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನದ ಲಕ್ಷ್ಮನ್‌ಗಢದ ಆಕಾಶ್ ಮೆಹ್ರಿಯಾ ಬಂಧಿತನೆಂದು ಗುರುತಿಸಲಾಗಿದೆ. ಈತ ಹನಿಟ್ರ್ಯಾಪ್ಗೆ ಒಳಗಾಗಿದ್ದು, ಈ ವೇಳೆ ದೇಶದ ರಹಸ್ಯ ಮಾಹಿತಿ ಹಂಚಿಕೊಂಡ ಪ್ರಕರಣದಲ್ಲಿ ಬಂಧಿಸಲಾಗಿದೆ. ಮೆಹ್ರಿಯಾ 2018 ರಲ್ಲಿ ಭಾರತೀಯ ಸೇನೆ ಸೇರ್ಪಡೆಗೊಂಡರು ಮತ್ತು 2019 ರಲ್ಲಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದರು. ಮೆಹ್ರಿಯಾ ಫೇಸ್‌ಬುಕ್ ಮೂಲಕ ಪಾಕಿಸ್ತಾನಿ ಮಹಿಳಾ ಏಜೆಂಟ್ ಸಂಪರ್ಕದಲ್ಲಿದ್ದರು ಮತ್ತು ಭಾರತೀಯ ಸೇನೆಯ ಬಗ್ಗೆ ಗೌಪ್ಯ ಮಾಹಿತಿಯನ್ನು ಆಕೆಗೆ ರವಾನಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ತಿರುಪತಿಯಲ್ಲಿ ಅಪಹರಣಗೊಂಡಿದ್ದ ಛತ್ತೀಸ್‌ಗಡದ ಬಾಲಕನನ್ನು ರಕ್ಷಿಸಿದ ಪೊಲೀಸರು
ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಹನಿಟ್ರ್ಯಾಪ್ಗೆ ಒಳಗಾಗಿದ್ದ ಆರೋಪಿ ಹಣಕ್ಕೆ ಬದಲಾಗಿ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರೆಂದು ತಿಳಿದುಬಂದಿದೆ. ಪಾಕಿಸ್ತಾನದ ಮಹಿಳಾ ಏಜೆಂಟ್ ಜತೆ ಅಶ್ಲೀಲ ಚಾಟ್ ಮಾಡಿದ್ದಾರೆ. ಆದ್ದರಿಂದ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.