ಜೈಪುರ(ರಾಜಸ್ಥಾನ): ಪಾಕಿಸ್ತಾನ ಮಹಿಳಾ ಎಜೆಂಟರ್ ಹನಿಟ್ರ್ಯಾಪ್ ಬಲೆಗೆ ಬಿದ್ದು, ಸೇನೆಯ ಗೌಪ್ಯ ಮಾಹಿತಿ ರವಾನೆ ಮಾಡಿರುವ ಆರೋಪದ ಮೇಲೆ ಯೋಧನೋರ್ವನ ಬಂಧನ ಮಾಡಲಾಗಿದೆ. ರಾಜಸ್ಥಾನ ಗುಪ್ತಚರ ಇಲಾಖೆ ಈ ಕಾರ್ಯಾಚರಣೆ ನಡೆಸಿದ್ದು, ಭಾರತೀಯ ಸೇನೆಯಲ್ಲಿ ಕೆಲಸ ಮಾಡ್ತಿದ್ದ ಯೋಧನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಆಪರೇಷನ್ ಸರ್ಹಾದ್ ಅಡಿ ಈ ಮಹತ್ವದ ಕಾರ್ಯಾಚರಣೆ ನಡೆಸಲಾಗಿದ್ದು, ಯೋಧನೊಬ್ಬ ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ರಹಸ್ಯ ದಾಖಲೆ ಹಾಗೂ ವಿವಿಧ ವಿಡಿಯೋ ರವಾನೆ ಮಾಡಿದ್ದಾನೆ. ಬಂಧಿತ ಯೋಧನನ್ನ ಶಾಂತಿಮೊಯ್ ರಾಣಾ ಎಂದು ಗುರುತಿಸಲಾಗಿದೆ.
ಭಾರತೀಯ ಯೋಧನನ್ನ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಇಬ್ಬರು ಮಹಿಳಾ ಏಜೆಂಟ್ ಹನಿಟ್ರ್ಯಾಪ್ನಲ್ಲಿ ಸಿಲುಕಿಸಿದ್ದಾರೆ. ಇದಾದ ಬಳಿಕ ಹಣದ ಆಮಿಷವೊಡ್ಡಿದ್ದು, ಸೇನೆಯ ಮಹತ್ವದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಗುಪ್ತಚರ ಇಲಾಖೆ ಡಿಜಿ ಉಮೇಶ್ ಮಿಶ್ರಾ ತಿಳಿಸಿದ್ದಾರೆ. ಬಂಧಿತ ಯೋಧ ಪಾಕಿಸ್ತಾನ ಗುಪ್ತಚರ ಇಲಾಖೆ ಮಹಿಳಾ ಏಜೆಂಟ್ಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ತಮ್ಮ ಕಾರ್ಯತಂತ್ರದ ಮಾಹಿತಿ ಹಂಚಿಕೊಳ್ಳುತ್ತಿದ್ದನು. ಇದರ ಮೇಲೆ ಗುಪ್ತಚರ ಇಲಾಖೆ ನಿಗಾ ಇಟ್ಟಿತ್ತು. ಜುಲೈ 25ರಂದು ಆತನ ಬಂಧನ ಮಾಡಲಾಗಿದೆ.
ಇದನ್ನೂ ಓದಿರಿ: ಏಳೂವರೆ ಅಡಿ ಎತ್ತರವಿರುವ ಯೋಧ.. ಅಜಾನುಬಾಹು ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಜನ
24 ವರ್ಷದ ಶಾಂತಿಮೊಯ್ ರಾಣಾ ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದು, ಮಾರ್ಚ್ 2018ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದರು. ವಾಟ್ಸ್ಆ್ಯಪ್ ಚಾಟ್, ವಿಡಿಯೋ, ಆಡಿಯೋ ಕರೆಗಳ ಮೂಲಕ ಪಾಕ್ ಗುಪ್ತಚರ ಸಂಸ್ಥೆ ಮಹಿಳಾ ಏಜೆಂಟ್ರೊಂದಿಗೆ ಸಂಪರ್ಕದಲ್ಲಿದ್ದರು. ಇದೀಗ ಆರೋಪಿಯನ್ನ ಜೈಪುರ್ಗೆ ಕರೆತರಲಾಗಿದ್ದು, ವಿಚಾರಣೆಗೊಳಪಡಿಸಲಾಗಿದೆ.
ಬಂಧಿತರಾಗಿರುವ ಶಾಂತಿಮೋಯ್ ರಾಣಾ ಅತ್ಯಂತ ಸೂಕ್ಷ್ಮ ಪ್ರದೇಶದ ರೆಜಿಮೆಂಟ್‌ನಲ್ಲಿ ನಿಯೋಜನೆಗೊಂಡಿದ್ದರು. ಅಂಕಿತಾ ಮತ್ತು ನಿಶಾ ಹೆಸರಿನಲ್ಲಿ ಪಾಕಿಸ್ತಾನಿ ಗುಪ್ತಚರ ಸಂಸ್ಥೆಯ ಮಹಿಳಾ ಏಜೆಂಟರು ಹನಿಟ್ರ್ಯಾಪ್ ನಡೆಸಿದ್ದು, ತಾವು ಉತ್ತರ ಪ್ರದೇಶದವರು ಎಂದು ಹೇಳಿಕೊಂಡಿದ್ದು, ಮಿಲಿಟರಿ ಇಂಜಿನಿಯರಿಂಗ್ ಹಾಗೂ ನರ್ಸಿಂಗ್ ಸೇವೆಗಳಲ್ಲಿ ಕೆಲಸ ಮಾಡುವುದಾಗಿ ತಿಳಿಸಿದ್ದರು.