ನವದೆಹಲಿ : ಮುಖ್ಯವಾಗಿ ಐಟಿ ವಲಯ ಸೇರಿದಂತೆ ಇನ್ನಿತರ ವಲಯಗಳಲ್ಲಿ ಭಾರಿ ಪ್ರಮಾಣದ ಉದ್ಯೋಗ ಕಡಿತಗಳ ನಂತರ ಈಗ ಉದ್ಯೋಗ ಮಾರುಕಟ್ಟೆಯಲ್ಲಿ ಶುಭ ಸುದ್ದಿಯೊಂದು ಬಂದಿದೆ. ಭಾರತದಲ್ಲಿ ಉದ್ಯೋಗ ನೇಮಕಾತಿಗಳು ಫೆಬ್ರವರಿಯಲ್ಲಿ ಶೇ 9 ರಷ್ಟು ಅನುಕ್ರಮ ಬೆಳವಣಿಗೆ ದಾಖಲಿಸಿದ್ದು, ಐಟಿ ವಲಯವು ದೇಶದ ಆರ್ಥಿಕತೆಗೆ ಸಕಾರಾತ್ಮಕ ಸೂಚನೆಗಳನ್ನು ನೀಡಿದೆ. ಉದ್ಯೋಗ ಕ್ಷೇತ್ರದ ಸಮೀಕ್ಷಕ ಕಂಪನಿ ನೌಕ್ರಿ ಜಾಬ್‌ಸ್ಪೀಕ್‌ನ ಅಂಕಿಅಂಶಗಳ ಪ್ರಕಾರ, ಐಟಿ ವಲಯದಲ್ಲಿ ಹೊಸ ಉದ್ಯೋಗಗಳ ಸಂಖ್ಯೆಯು ಹಿಂದಿನ ತಿಂಗಳಿಗೆ ಹೋಲಿಸಿದರೆ ಫೆಬ್ರವರಿಯಲ್ಲಿ ಶೇಕಡಾ 10 ರಷ್ಟು ಹೆಚ್ಚಾಗಿದೆ.
ಅನಾಲಿಟಿಕ್ಸ್ ಮ್ಯಾನೇಜರ್‌ಗಳು, ಬಿಗ್ ಡೇಟಾ ಇಂಜಿನಿಯರ್‌ಗಳು, ಕ್ಲೌಡ್ ಸಿಸ್ಟಮ್ ಅಡ್ಮಿನಿಸ್ಟ್ರೇಟರ್‌ಗಳು ಮತ್ತು ಆಗ್ಮೆಂಟೆಡ್ ರಿಯಾಲಿಟಿ QA ಟೆಸ್ಟರ್‌ಗಳಂತಹ ವಿಶೇಷ ಉದ್ಯೋಗಿಗಳ ಬೇಡಿಕೆಯು ಕ್ರಮವಾಗಿ ಶೇ 29, ಶೇ 25, ಶೇ 21 ಮತ್ತು ಶೇ 20 ರಷ್ಟು ಹೆಚ್ಚಾಗಿದೆ. DevOps ಮತ್ತು DevSec ಇಂಜಿನಿಯರ್‌ಗಳ ಬೇಡಿಕೆಯು ಕ್ರಮವಾಗಿ ಶೇಕಡಾ 19 ಮತ್ತು 18 ರಷ್ಟು ಹೆಚ್ಚಾಗಿದೆ. ಡೇಟಾ ಸೈಂಟಿಸ್ಟ್ಗಳು ಮತ್ತು ಸಾಫ್ಟವೇರ್ ಡೆವಲಪರ್ ಉದ್ಯೋಗಿಗಳ ಬೇಡಿಕೆ ಕ್ರಮವಾಗಿ ಶೇ 9 ಮತ್ತು ಶೇ 7 ರಷ್ಟು ಹೆಚ್ಚಾಗಿದೆ.
ರಿಯಲ್ ಎಸ್ಟೇಟ್, ಹಾಸ್ಪಿಟ್ಯಾಲಿಟಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿನ ಹೊಸ ಉದ್ಯೋಗಗಳ ಸಂಖ್ಯೆಯು ಜನವರಿ ಮತ್ತು ಫೆಬ್ರವರಿಯಲ್ಲಿ ಕ್ರಮವಾಗಿ 13 ಶೇಕಡಾ, 10 ಮತ್ತು 10 ಶೇಕಡಾ ಹೀಗೆ ಎರಡಂಕಿಯ ಅನುಕ್ರಮ ಬೆಳವಣಿಗೆಯನ್ನು ಕಂಡಿದೆ. ಬ್ಯಾಂಕಿಂಗ್, ಬಿಪಿಒ ಮತ್ತು ರಿಟೇಲ್‌ನಂತಹ ಕ್ಷೇತ್ರಗಳಲ್ಲಿ ಸಹ ಇದೇ ರೀತಿಯ ಪ್ರವೃತ್ತಿಯನ್ನು ತೋರಿಸಿವೆ, ಹೊಸ ಉದ್ಯೋಗಗಳ ಸಂಖ್ಯೆಯು ಹಿಂದಿನ ತಿಂಗಳಿಗಿಂತ ಕ್ರಮವಾಗಿ ಶೇಕಡಾ 9, 7 ಮತ್ತು 7 ರಷ್ಟು ಹೆಚ್ಚಾಗಿದೆ ಎಂದು ವರದಿ ತೋರಿಸಿದೆ.
ಕಳೆದ ಮೂರು ತಿಂಗಳಲ್ಲಿ ನಕಾರಾತ್ಮಕ ಪ್ರವೃತ್ತಿಯನ್ನು ಅನುಭವಿಸುತ್ತಿರುವ ಐಟಿ ವಲಯವು ಶೇಕಡಾ 10 ರಷ್ಟು ಅನುಕ್ರಮ ಬೆಳವಣಿಗೆಯನ್ನು ತೋರಿಸಿದೆ. ಈ ಬೆಳವಣಿಗೆಯು ಐಟಿ ಕ್ಷೇತ್ರದಲ್ಲಿ ನೇಮಕಾತಿ ಭಾವನೆಗಳನ್ನು ಬದಲಾಯಿಸುವ ಸೂಚಕವಾಗಿದೆ ಎಂದು ನೌಕ್ರಿ ಡಾಟ್ ಕಾಮ್ನ ಮುಖ್ಯ ವ್ಯಾಪಾರ ಅಧಿಕಾರಿ ಪವನ್ ಗೋಯಲ್ ಹೇಳಿದರು. ದೊಡ್ಡ ಮಹಾನಗರಗಳಗಳಾದ ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಪುಣೆಗಳಲ್ಲಿ ನೇಮಕಾತಿ ಚಟುವಟಿಕೆ ಎರಡಂಕಿಯ ಬೆಳವಣಿಗೆಯನ್ನು ಕಂಡಿವೆ. ಉದಯೋನ್ಮುಖ ನಗರಗಳ ಪೈಕಿ ಕೊಯಮತ್ತೂರು ಮತ್ತು ಚಂಡೀಗಢದಲ್ಲಿ ಹೊಸ ಉದ್ಯೋಗಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.
ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯ ಹಿನ್ನೆಲೆಯಲ್ಲಿ 2023ರ ಆರಂಭದ ತಿಂಗಳಲ್ಲಿ ವಿಶ್ವಾದ್ಯಂತ ಸುಮಾರು 1 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಭಾರತದ ತಂತ್ರಜ್ಞಾನ ವಲಯದ ಉದ್ಯಮದ ಮೇಲೂ ಉದ್ಯೋಗ ಕಡಿತದ ಕರಿನೆರಳು ಆವರಿಸಿತ್ತು. ಆದಾಗ್ಯೂ ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಭಾರತದ ಮೇಲೆ ಅಷ್ಟೇನೂ ಆಗದು ಎಂದು ಕೆಲ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ: ಉದ್ಯೋಗ ಕಡಿತ ಬದಲು ಪ್ರಮುಖ ನಿರ್ಣಯ.. ಐಟಿ ಕಂಪನಿಗಳಿಗೆ ಮಾದರಿಯಾದ ಇಂಟೆಲ್