ಶಿಮ್ಲಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಪಾಳಯಕ್ಕೆ ಬಹುದೊಡ್ಡ ಆಘಾತ ಉಂಟಾಗಿದೆ. ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಧರಂಪಾಲ್ ಠಾಕೂರ್ ಖಂಡ್ ಸೇರಿದಂತೆ ರಾಜ್ಯದ ಹಲವು ಕಾಂಗ್ರೆಸ್ ನಾಯಕರು ಮತ್ತು ಸದಸ್ಯರು ಸೋಮವಾರ ಬಿಜೆಪಿಗೆ ಸೇರಿದ್ದಾರೆ.
ಕೊನೆಯ ಹಂತದಲ್ಲೇ ಪಕ್ಷದ ಒಟ್ಟು 26 ನಾಯಕರು ಕಾಂಗ್ರೆಸ್ ತೊರೆದು ಆಡಳಿತಾರೂಢ ಬಿಜೆಪಿ ಸೇರಿದ್ದಾರೆ. ಮತದಾನಕ್ಕೆ ಮೂರು ದಿನವಷ್ಟೇ ಬಾಕಿ ಇರುವಾಗ ನಡೆದ ವಿದ್ಯಮಾನ ಕೈ ಪಕ್ಷಕ್ಕೆ ಪೆಟ್ಟು ನೀಡಿದೆ.
ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಧರಂಪಾಲ್ ಠಾಕೂರ್, ಮಾಜಿ ಕಾರ್ಯದರ್ಶಿ ಆಕಾಶ್ ಸೈನಿ, ಮಾಜಿ ಕೌನ್ಸಿಲರ್ ರಾಜನ್ ಠಾಕೂರ್, ಮಾಜಿ ಜಿಲ್ಲಾ ಉಪಾಧ್ಯಕ್ಷ ಅಮಿತ್ ಮೆಹ್ತಾ, ಮೆಹರ್ ಸಿಂಗ್ ಕನ್ವರ್, ಯುವ ಕಾಂಗ್ರೆಸ್ ರಾಹುಲ್ ನೇಗಿ, ಜೈ ಮಾ ಶಕ್ತಿ ಸಾಮಾಜಿಕ ಸಂಸ್ಥಾನದ ಅಧ್ಯಕ್ಷ ಜೋಗಿಂದರ್ ಠಾಕೂರ್ ಬಿಜೆಪಿಗೆ ಸೇರಿದವರು.
ಇವರೊಂದಿಗೆ ನರೇಶ್ ವರ್ಮಾ, ಚಮ್ಯಾನ ವಾರ್ಡ್ ಸದಸ್ಯ ಯೋಗೇಂದ್ರ ಸಿಂಗ್, ಟ್ಯಾಕ್ಸಿ ಯೂನಿಯನ್ ಸದಸ್ಯ ರಾಕೇಶ್ ಚೌಹಾಣ್, ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ ಶಿಮ್ಲಾ ಅಧ್ಯಕ್ಷ ಧರ್ಮೇಂದ್ರ ಕುಮಾರ್, ವೀರೇಂದ್ರ ಶರ್ಮಾ, ರಾಹುಲ್ ರಾವತ್, ಸೋನು ಶರ್ಮಾ, ಅರುಣ್ ಕುಮಾರ್, ಶಿವಂ ಕುಮಾರ್, ಗೋಪಾಲ್ ಠಾಕೂರ್, ಚಮನ್ ಲಾಲ್, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ದೇವೇಂದ್ರ ಸಿಂಗ್, ಮಹೇಂದ್ರ ಸಿಂಗ್, ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಮುನೀಶ್ ಮಂಡ್ಲಾ, ಬಾಲಕೃಷ್ಣ ಬಾಬಿ, ಸುನೀಲ್ ಶರ್ಮಾ, ಸುರೇಂದ್ರ ಠಾಕೂರ್, ಸಂದೀಪ್ ಸಮತಾ ಮತ್ತು ರವಿ ಕಮಲ ಬಾವುಟ ಹಿಡಿದರು.
ಹಿಮಾಚಲ ಪ್ರದೇಶ ವಿಧಾನಸಭೆಗೆ ನವೆಂಬರ್ 12 ರಂದು ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಿಗದಿಯಾಗಲಿದೆ.
ಇದನ್ನೂ ಓದಿ: ಮಹಿಳೆಯರಿಗೆ ಮೀಸಲಾತಿ, ಏಕರೂಪ ನಾಗರಿಕ ಸಂಹಿತೆ ಜಾರಿ: ಹಿಮಾಚಲ ಗೆಲ್ಲಲು ಬಿಜೆಪಿ ಪ್ರಣಾಳಿಕೆ