ಕೋಟಾ, ರಾಜಸ್ಥಾನ: ಎಂಬಿಬಿಎಸ್ ಸೀಟುಗಳನ್ನು ಹೆಚ್ಚಳ ಮಾಡುವ ಮೂಲಕ ವೈದ್ಯಕೀಯ ಕೋರ್ಸ್ ಸೇರಬೇಕು ಎಂದು ಬಯಸುವ ಅಭ್ಯರ್ಥಿಗಳಿಗೆ ನೀಟ್ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ- 2025) ಶುಭ ಸುದ್ದಿ ನೀಡಲಿದೆ. ದೇಶದಲ್ಲಿ ಮತ್ತಷ್ಟು ಹೊಸ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳು ನಿರ್ಮಾಣವಾದ ಹಿನ್ನೆಲೆ ಈ ವರ್ಷದಿಂದ 1.2 ಲಕ್ಷ ಎಂಬಿಬಿಎಸ್ ಸೀಟುಗಳು ಲಭ್ಯವಾಗಲಿವೆ. ಕಳೆದ ವರ್ಷ 117,950 ಸೀಟುಗಳು ಲಭ್ಯವಿದ್ದವು.
ಶೀಘ್ರದಲ್ಲೇ ನೋಂದಣಿ ಪ್ರಕ್ರಿಯೆ: ಅಧಿಕೃತ ಮೂಲಗಳ ಪ್ರಕಾರ ಶೀಘ್ರದಲ್ಲೇ ನೀಟ್ ಯುಜಿ-2025ರ ಪರೀಕ್ಷೆಗೆ ನೋಂದಣಿ ನಡೆಯಲಿದೆ. ಕಳೆದ ವರ್ಷ 24,06,079 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ವರ್ಷದ ಪರೀಕ್ಷೆಗೆ 25 ಲಕ್ಷಕ್ಕೂ ಹೆಚ್ಚು ನೋಂದಣಿಯಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಕಳೆದೊಂದು ದಶಕದಲ್ಲಿ ಶೇ 107ರಷ್ಟು ಸೀಟುಗಳ ಏರಿಕೆ: ದತ್ತಾಂಶದ ಪ್ರಕಾರ, ಕಳೆದೊಂದು ದಶಕದಿಂದ ಲಭ್ಯವಿರುವ ಎಂಬಿಬಿಎಸ್ ಸೀಟುಗಳ ಸಂಖ್ಯೆ ಶೇ 107ರಷ್ಟು ಏರಿಕೆ ಕಂಡಿದೆ. 2015 ರಲ್ಲಿ 56,908 ರಷ್ಟು ಸೀಟುಗಳಿದ್ದರೆ ಇದೀಗ ಒಟ್ಟಾರೆ 1,17,950 ಸೀಟುಗಳಿಗೆ ಏರಿಕೆ ಕಂಡಿದೆ. ಕಳೆದೆರಡು ವರ್ಷದಲ್ಲೇ ಅಂದರೆ 20,000 ಎಂಬಿಬಿಎಸ್ ಸೀಟುಗಳನ್ನ ಹೆಚ್ಚಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಮೋದಿ ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.
ವೈದ್ಯಕೀಯ ಶಿಕ್ಷಣಕ್ಕೆ ಸೇರಬೇಕು ಎಂಬ ಕನಸು ಹೊಂದಿರುವ ವಿದ್ಯಾರ್ಥಿಗಳು ಈ ಸೀಟುಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡಿರುವುದರಿಂದ ಹರ್ಷಗೊಂಡಿದ್ದಾರೆ. ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಳ ಮಾಡಿರುವುದರಿಂದ ಆ ಸಂಸ್ಥೆಗಳಲ್ಲಿ ಸರಿಯಾದ ಮೂಲ ಸೌಕರ್ಯ ಹಾಗೂ ಉತ್ತಮ ತರಬೇತಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಮನವಿ ಮಾಡಲಾಗಿದೆ.
ನೀಟ್ ಯುಜಿ 2025ರ ಪ್ರಮುಖ ಅಂಶಗಳು:
- ನೀಟ್ ಪರೀಕ್ಷೆಯ ನೀರಿಕ್ಷಿತ ದಿನಾಂಕ: ಮೇ 4, 2025
- ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕ: ಫೆಬ್ರವರಿ ಮೊದಲ ವಾರದಲ್ಲಿ ಆರಂಭವಾಗುವ ನಿರೀಕ್ಷೆ ಇದೆ.
- ಸೀಟುಗಳ ಸಂಖ್ಯೆ: ಈಗಿರುವ ಒಟ್ಟಾರೆ ಎಂಬಿಬಿಎಸ್ ಸೀಟುಗಳ ಸಂಖ್ಯೆ 1.2 ಲಕ್ಷಕ್ಕೆ ಹೆಚ್ಚಳವಾಗುವ ಸಾಧ್ಯತೆ
- 25 ಲಕ್ಷ ಮೀರಿ ಎಂಬಿಬಿಎಸ್ಗೆ ಈ ಬಾರಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿಕೊಳ್ಳುವ ಸಾಧ್ಯತೆಗಳಿವೆ
- ಕಳೆದ ವರ್ಷದ ಅಂಕಿ ಅಂಶ: ಕಳೆದ ವರ್ಷ 24 ಲಕ್ಷದ 6 ಸಾವಿರದ 79 ಅಭ್ಯರ್ಥಿಗಳು ನೀಟ್ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 23.33 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ನೀಟ್ ನೋಂದಣಿ, ಪರೀಕ್ಷೆ ದಿನಾಂಕ ಹಾಗೂ ಇತರ ಸಂಬಂಧಿತ ಮಾಹಿತಿಗೆ ಅಭ್ಯರ್ಥಿಗಳು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಸೂಕ್ತ ಹಾಗೂ ನಿಖರ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬೇಕಾ?: ಈ ಸಲಹೆಗಳನ್ನು ಪಾಲಿಸಿದರೆ ನೀವೇ ಟಾಪರ್
ಇದನ್ನೂ ಓದಿ: ಪುಸ್ತಕ ತೆರೆದ ತಕ್ಷಣವೇ ನಿಮಗೆ ನಿದ್ರೆ ಬರುತ್ತಿದೆಯೇ? ತಜ್ಞರ ಟಾಪ್ ಟೆನ್ ಟಿಪ್ಸ್ ಇಲ್ಲಿವೆ ನೋಡಿ