ಕೌಶಂಬಿ (ಉತ್ತರ ಪ್ರದೇಶ): ಇತ್ತೀಚಿಗೆ ದೇಶಾದ್ಯಂತ ಸುದ್ದಿಯಾಗಿದ ದೆಹಲಿ ಪ್ರಕರಣದಂತೆಯೇ ಉತ್ತರ ಪ್ರದೇಶದ ಕೌಶಂಬಿಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು 200 ಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದ ಘಟನೆ ನಡೆದಿದೆ. ವಿದ್ಯಾರ್ಥಿನಿಯ ಕೈ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ವಿದ್ಯಾರ್ಥಿನಿಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೇವಖರಪುರ ಗ್ರಾಮದ ನಿವಾಸಿ ರೇಣು ದೇವಿ ಮಂಜನ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರೇಣುದೇವಿ ಅವರ ಪುತ್ರಿ ಕೌಶಲ್ಯ ದೇವಿ ಮಂಜನ್‌ಪುರದ ಖಾಸಗಿ ಕಂಪ್ಯೂಟರ್ ಸೆಂಟರ್‌ನಲ್ಲಿ ಓದುತ್ತಿದ್ದಾರೆ. ದೂರಿನ ಪ್ರಕಾರ, ಜ.1ರಂದು ಅಂದರೆ ಭಾನುವಾರ, ಕೌಶಲ್ಯ ತನ್ನ ಸೈಕಲ್‌ನಲ್ಲಿ ತರಗತಿಗೆ ಹೋಗುತ್ತಿದ್ದರು. ಬಜಾಪುರ ಗ್ರಾಮದ ಬಳಿ ಹಿಂದಿನಿಂದ ಬಂದ ಕಾರು ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ತುಸ್ಲಿಪುರ ನಿವಾಸಿ ರಾಮ್ ನರೇಶ್ ಕಾರು ಚಲಾಯಿಸುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.
ಡಿಕ್ಕಿಯ ನಂತರವೂ ಕಾರು ನಿಲ್ಲಿಸದೆ ಅತಿವೇಗದಲ್ಲಿ ಓಡಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಈ ವೇಳೆ ಕೌಶಲ್ಯಾ ಕಾರಿನಡಿ ಸಿಲುಕಿದ್ದು ಸುಮಾರು 200 ಮೀಟರ್ ಎಳೆದೊಯ್ಯಲಾಗಿದೆ. ಘಟನೆಯ ನಂತರ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಪಲ್ಟಿಯಾಗಿದೆ. ಅಷ್ಟರಲ್ಲಾಗಲೇ ಕೌಶಲ್ಯ ತೀವ್ರವಾಗಿ ಗಾಯಗೊಂಡಿದ್ದರು. ಘಟನೆ ಬಳಿಕ ಕಾರು ಚಾಲಕ ಹಾಗೂ ಅದರಲ್ಲಿ ಕುಳಿತಿದ್ದವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರು ಚಾಲಕ ಪಾನಮತ್ತನಾಗಿದ್ದ ಎಂದು ರೇಣುದೇವಿ ಆರೋಪಿಸಿದ್ದಾರೆ. ಘಟನೆಯ ನಂತರ ಅಕ್ಕಪಕ್ಕದಲ್ಲಿದ್ದ ಜನರು ಕೌಶಲ್ಯಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಒಂದು ಕೈ ಮತ್ತು ಒಂದು ಕಾಲಿನ ಮೂಳೆ ಮುರಿದಿದೆ ಎಂದು ವೈದ್ಯರು ಹೇಳಿದ್ದಾರೆ. ಬಾಲಕಿಯ ಮುಖ, ಎದೆ ಮತ್ತು ಬೆನ್ನಿನ ಮೇಲೆ ಗಂಭೀರ ಗಾಯಗಳಾಗಿವೆ. ಸದ್ಯ ವಿದ್ಯಾರ್ಥಿನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.
ದೆಹಲಿಯಲ್ಲಿ ನಡೆದಿದ್ದ ಪ್ರಕರಣ: ಇದೇ ಮಾದರಿಯ ಘಟನೆ ದೆಹಲಿಯ ಹೊರವಲಯದ ಕಂಝವಾಲಾ ಪ್ರದೇಶದಲ್ಲಿ ನಡೆದಿತ್ತು. ಡಿಸೆಂಬರ್ 31 ಮತ್ತು ಜನವರಿ 1ರ ತಡರಾತ್ರಿ ಹೊಸ ವರ್ಷದ ಆಚರಣೆ ದಿನ ಸ್ಕೂಟಿಯಲ್ಲಿ ಹೋಗುತ್ತಿದ್ದ 20 ವರ್ಷದ ಯುವತಿಗೆ ಕಾರು ಡಿಕ್ಕಿಯಾಗಿದ್ದು, 4 ಕಿಲೋ ಮೀಟರ್ವರೆಗೆ ದೇಹವನ್ನು ಎಳೆದೊಯ್ಯಲಾಗಿತ್ತು. ಈ ಘಟನೆ ನಂತರ ಸಂತ್ರಸ್ತ ಯುವತಿಯು ನಗ್ನ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಇದನ್ನೂ ಓದಿ:ದೆಹಲಿ ಕಾರು ಅಪಘಾತ ಪ್ರಕರಣ : ಪೊಲೀಸ್ ಬಂದೋಬಸ್ತ್ನಲ್ಲಿ ಅಂಜಲಿ ಚಿತೆಗೆ ಅಗ್ನಿಸ್ಪರ್ಶ