ತೆಲಂಗಾಣ : ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡದ ಪರಿಣಾಮ ರಾಜ್ಯದಲ್ಲಿ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಹೈದರಾಬಾದ್ ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಮಳೆಯಾಗಿದೆ. ಕನ್ನೈಗುಡೆಂನಲ್ಲಿ ಅತಿ ಹೆಚ್ಚು ಅಂದರೆ 98.4 ಮಿಮೀ ಮಳೆ ದಾಖಲಾಗಿದೆ. ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಂತಿಕುಮಾರಿ ಅವರಿಂದು ಭದ್ರಾದ್ರಿ ಕೊತಗುಡೆಂ, ಜನಾಂವ್, ಕಾಮರೆಡ್ಡಿ, ಕರೀಂನಗರ, ಖಮ್ಮಂ, ಮಹಬೂಬಾಬಾದ್, ಮುಳುಗು, ಪೆದ್ದಪಲ್ಲಿ, ಸಿದ್ದಿಪೇಟೆ, ವಾರಂಗಲ್ ಮತ್ತು ಹನ್ಮಕೊಂಡ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಟೆಲಿಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಮುಂದಿನ 3 ದಿನ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಯಾವುದೇ ಪ್ರಾಣಹಾನಿಯಾಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಆದೇಶಿಸಿದರು. ಜೊತೆಗೆ, ಅಪಾಯವಿರುವ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಮತ್ತು ತುರ್ತು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ : ಬೆಳಗಾವಿ : ಧಾರಾಕಾರ ಮಳೆಗೆ ಸೇತುವೆ, ರಸ್ತೆ, ದೇವಸ್ಥಾನಗಳು ಜಲಾವೃತ
ಮುಂದಿನ 3 ದಿನಗಳಲ್ಲಿ ಮೆಹಬೂಬಾಬಾದ್, ವಾರಂಗಲ್, ಹನುಮಕೊಂಡ ಮತ್ತು ಖಮ್ಮಂ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಸಿದ್ದಿಪೇಟೆ, ಜನಗಾಮ, ನಿಜಾಮಾಬಾದ್, ಪೆದ್ದಪಲ್ಲಿ, ಜಗಿತ್ಯಾಲ, ಜಯಶಂಕರ್ ಭೂಪಾಲಪಲ್ಲಿ ಸಹ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಹಾಗೆಯೇ, ಆದಿಲಾಬಾದ್, ಕುಮುರಂ ಭೀಮ್ ಆಸಿಫಾಬಾದ್, ಮಂಚಿರ್ಯಾಲ, ನಿರ್ಮಲ್, ನಿಜಾಮಾಬಾದ್, ರಾಜಣ್ಣ ಸಿರಿಸಿಲ್ಲ, ಮೇದಕ್, ಮೇಡ್ಚಲ್ ಮಲ್ಕಾಜಿಗಿರಿ, ಸಂಗಾರೆಡ್ಡಿ ಮತ್ತು ರಂಗಾರೆಡ್ಡಿ ಭಾಗದಲ್ಲಿ ಭಾರಿ ಮಳೆಯಾಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : ಯಮುನಾ ನದಿಯಲ್ಲಿ ನೀರಿನ ಮಟ್ಟ ಇಳಿಕೆ : ರಾಷ್ಟ್ರ ರಾಜಧಾನಿಗೆ ಮುಗಿಯದ ಪ್ರವಾಹ ಭೀತಿ
ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಅಧಿಕ ಮಳೆಯಿಂದಾಗಿ ಪ್ರಾಣಹಿತ ಮತ್ತು ಗೋದಾವರಿ ನದಿಗಳ ಹರಿವು ಹೆಚ್ಚಾಗಿದೆ. ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಭದ್ರಾಚಲಂ ಕ್ಷೇತ್ರದಲ್ಲಿ ಎರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಭದ್ರಾಚಲಂನಲ್ಲಿ ಗೋದಾವರಿ ನೀರಿನ ಮಟ್ಟ ಹೆಚ್ಚುತ್ತಿದೆ. ಮಂಗಳವಾರ ಸಂಜೆ ವೇಳೆಗೆ ನೀರಿನ ಮಟ್ಟ 19 ಅಡಿ ತಲುಪಿದ್ದು, ಮತ್ತಷ್ಟು ನೀರು ಹರಿದು ಬರಲಿದೆ ಎಂದು ಕೇಂದ್ರ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಯುರೋಪ್ - ಅಮೆರಿಕದಲ್ಲಿ ವಿಪರೀತ ತಾಪಮಾನ, ಏಷ್ಯಾದಲ್ಲಿ ಮಳೆಯಬ್ಬರ : ಇದು El Nino ಎಫೆಕ್ಟ್
ಇನ್ನೊಂದೆಡೆ, ವರುಣನ ಕೃಪೆಯಿಂದ ರೈತರು ಸಂತಸಗೊಂಡಿದ್ದಾರೆ. ಕೃಷಿ ಕೆಲಸಗಳು ಪ್ರಾರಂಭಗೊಂಡಿವೆ. ಅದಿಲಾಬಾದ್, ನಿಜಾಮಾಬಾದ್, ಕರೀಂನಗರ ಮತ್ತು ವಾರಂಗಲ್ ಜಿಲ್ಲೆಗಳ ಕೆರೆ, ಹೊಳೆಗಳು ಜಲಾವೃತಗೊಳ್ಳುತ್ತಿವೆ. ರಾಜ್ಯದಲ್ಲಿ ಮೂರು ದಿನ ಮಳೆ ಮುಂದುವರೆಯುವ ಸೂಚನೆ ಹಿನ್ನೆಲೆ ಹಲವು ಜಿಲ್ಲೆಗಳಿಗೆ ಆರೇಂಜ್ ಮತ್ತು ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದನ್ನೂ ಓದಿ : ಮಳೆಯಿಂದ ಉಕ್ಕೇರಿದ ಯಮುನೆ ; ತಾಜ್ಮಹಲ್ ಗೋಡೆಗೂ ಅಪ್ಪಳಿಸಿದ ನೀರು ! ಅಪಾಯವಿಲ್ಲವೆಂದ ಪುರಾತತ್ವ ಇಲಾಖೆ