ಮುಂಬೈ: ಮುಂಬೈನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇದರಿಂದಾಗಿ ಭೂಕುಸಿತ ಉಂಟಾಗಿದೆ. ನಗರದ ಕೆಲವು ಪ್ರದೇಶಗಳ ಗೋಡೆಗಳು ಕುಸಿದಿವೆ.
ಮಹಾರಾಷ್ಟ್ರದ ರಾಜಧಾನಿಯಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಈವರೆಗೆ 30 ಮಂದಿ ಸಾವನ್ನಪ್ಪಿ, 6 ಮಂದಿ ಗಾಯಗೊಂಡಿದ್ದಾರೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ. ಈ ಪೈಕಿ 23 ಸಾವುಗಳು ಮತ್ತು ಆರು ಗಾಯಾಳುಗಳು ಮಾಹುಲ್ ಮತ್ತು ವಿಖ್ರೋಲಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಉಂಟಾಗಿದೆ. ಮನೆ ಕುಸಿತದಿಂದ ಭಂಡಪ್‌ನಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅಂಧೇರಿಯಲ್ಲಿ ಒಬ್ಬ ವ್ಯಕ್ತಿ ಶಾರ್ಟ್ ಸರ್ಕ್ಯೂಟ್ನಿಂದ ಜೀವ ಕಳೆದುಕೊಂಡಿದ್ದಾರೆ.
ಭೂಕುಸಿತವು ಮಹೌಲ್‌ನಲ್ಲಿ 17 ಜನರ ಸಾವಿಗೆ ಕಾರಣವಾಗಿದ್ದರೆ, ಐದು ಮಂದಿ ಗಾಯಗೊಂಡಿದ್ದಾರೆ. ವಿಖ್ರೋಲಿಯಲ್ಲಿ ಆರು ಜನರು ಪ್ರಾಣ ಕಳೆದುಕೊಂಡರೆ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮುಂಬೈ ಮಳೆ ಪರಿಸ್ಥಿತಿ ಕುರಿತು ಮುನ್ನೆಚ್ಚರಿಕೆ ಹಾಗು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಮುಂಬೈಗೆ ರೆಡ್ ಅಲರ್ಟ್ ಘೋಷಣೆ :
ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಪ್ರವಾಹಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಿದರು. ಭಾರೀ ಮಳೆಯ ನಂತರ ಭಾರತ ಹವಾಮಾನ ಇಲಾಖೆ (ಐಎಂಡಿ) ಮುಂಬೈಗೆ ರೆಡ್ ಅಲರ್ಟ್ ಘೋಷಿಸಿದೆ. ಇಲಾಖೆ ಕೆಲವು ಸ್ಥಳಗಳಲ್ಲಿ "ಅತಿ ಹೆಚ್ಚು" ಮಳೆಯಾಗುವ ಮುನ್ಸೂಚನೆ ನೀಡಿದೆ. ಮುಂದಿನ ಐದು ದಿನಗಳಲ್ಲಿ ಮುಂಬೈನಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಭಾರೀ ಮಳೆಯಾಗಿರುವುದರಿಂದ ಮುಂಬೈಗೆ ನೀರು ಪೂರೈಸುವ ಪ್ರಮುಖ ತಾಣಗಳಲ್ಲಿ ಒಂದಾದ ಭಂಡಪ್ ನೀರು ಶುದ್ಧೀಕರಣ ಸಂಕೀರ್ಣವನ್ನು ನಿಲ್ಲಿಸಿರುವುದರಿಂದ ಕುಡಿಯುವ ನೀರನ್ನು ಕುದಿಸಿ ಕುಡಿಯುವಂತೆ ಬಿಎಂಸಿ ನಾಗರಿಕರಿಗೆ ತಿಳಿಸಿದೆ.
ರೈಲ್ವೇ ಹಳಿಗಳು ಸಹ ಮುಳುಗಡೆ:
ಮಳೆಯಿಂದಾಗಿ ರೈಲ್ವೇ ಹಳಿಗಳು ಸಹ ಮುಳುಗಡೆಯಾಗಿವೆ. ಭಾನುವಾರ ಸಂಜೆ 4: 30 ರ ಹೊತ್ತಿಗೆ, 11 ರೈಲುಗಳ ಸಂಚಾರ ಸ್ಥಗಿತಗೊಂಡಿತು. ಆರು ರೈಲುಗಳನ್ನು ರದ್ದುಪಡಿಸಲಾಗಿದೆ.
ಮುಂಬೈ ನಗರದಲ್ಲಿ ಶನಿವಾರ ರಾತ್ರಿ 8 ರಿಂದ ಮಧ್ಯರಾತ್ರಿ 2 ರವರೆಗೆ 156.94 ಮಿ.ಮೀ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಉಪನಗರಗಳಲ್ಲಿ ಕ್ರಮವಾಗಿ 143.14 ಮಿ.ಮೀ ಮತ್ತು ಪಶ್ಚಿಮ 125.37 ಮಿ.ಮೀ. ಮಳೆಯಾಗಿದೆ.
ಹಲವಾರು ಪ್ರದೇಶಗಳಲ್ಲಿ ನುಗ್ಗಿದ ನೀರು:
ಭಾರಿ ಮಳೆಯು ಮಹಾನಗರದ ಹಲವಾರು ಪ್ರದೇಶಗಳ ಜಲಾವೃತಕ್ಕೆ ಕಾರಣವಾಯಿತು. ಚುನಭಟ್ಟಿ, ಸಿಯಾನ್, ದಾದರ್, ಮತ್ತು ಗಾಂಧಿ ಮಾರುಕಟ್ಟೆ, ಚೆಂಬೂರು ಮತ್ತು ಕುರ್ಲಾ ಎಲ್ಬಿಎಸ್ ರಸ್ತೆ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ನೀರು ನುಗ್ಗಿದೆ.
2019 ರಲ್ಲಿ ನಗರವು ಜುಲೈ 2 ರಂದು 375.2 ಮಿ.ಮೀ ದಾಖಲಿಸಿದ್ದು, 2010 ರಿಂದ ಜುಲೈನಲ್ಲಿ ಅತಿ ಹೆಚ್ಚು 24 ಗಂಟೆಗಳ ಮಳೆಯಾಗಿದೆ.