ಹೈದರಾಬಾದ್: ಬುಧವಾರ ರಾತ್ರಿಯಿಂದ ಹೈದರಾಬಾದ್‌ನಲ್ಲಿ ಭಾರಿ ಮಳೆಯಾಗಿದೆ. ನಗರದ ಹಲವಾರು ಪ್ರದೇಶಗಳು ನೀರಿನಲ್ಲಿ ಮುಳುಗಿಹೋಗಿವೆ. ನಿರಂತರ ಮಳೆಯಿಂದಾಗಿ ಮುತ್ತಿನ ನಗರಿಯ ಅನೇಕ ಕಾಲೋನಿಗಳಲ್ಲಿನ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಸರೂರ್ನಗರದಲ್ಲಿ ಕಾಲುವೆಗಳಾದ ರಸ್ತೆಗಳು:
ಸರೂರ್ ನಗರ ಕೊಳದ ಸಮೀಪವಿರುವ ಅನೇಕ ಕಾಲೋನಿಗಳು ಮಳೆ ನೀರಿನಿಂದ ತುಂಬಿ ಹೋಗಿವೆ. ಗಡ್ಡಿ ಅನ್ನಾರಂ ವಿಭಾಗದ ಕೋದಂಡರಾಮ್ ನಗರ ಮತ್ತು ಸೀಸಲಾ ಬಸ್ತಿ, ಲಿಂಗೋಜಿ ಗುಡಾ ವಿಭಾಗದ ತಪೋವನ್, ಸೈನಗರ ಮತ್ತು ಗ್ರೀನ್ ಪಾರ್ಕ್ ಕಾಲೋನಿಗಳು ಮಳೆನೀರಿನಲ್ಲಿ ಮುಳುಗಿವೆ. ಇಲ್ಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದ್ದಾರೆ. ರಾತ್ರಿಯಿಂದ ಮಳೆಯಿಂದ ಹೊರಬರಲಾಗದೆ ನೀರಿನಲ್ಲಿಯೇ ಸಿಲುಕಿಕೊಂಡಿದ್ದರು. ಡ್ರೈನೇಜ್‌ಗಳು ತುಂಬಿ ಹರಿದಿವೆ. ಮಳೆನೀರು ಮತ್ತು ಒಳಚರಂಡಿ ನೀರು ಒಟ್ಟಿಗೆ ಹರಿದಿದ್ದು, ಅಪಾರ್ಟ್‌ಮೆಂಟ್‌ಗಳಲ್ಲಿನ ನೆಲಮಾಳಿಗೆಗಳೆಲ್ಲವೂ ನೀರಿನಿಂದ ಆವೃತವಾಗಿದ್ದವು.
ಪ್ರವಾಹಕ್ಕೆ ಸಿಲುಕಿದ ಶಾಸಕರ ಕಾರು:
ಶಾಸಕ ಸುಧೀರ್ ರೆಡ್ಡಿ ಅವರು ಪ್ರವಾಹಪೀಡಿತ ಪ್ರದೇಶಗಳ ಪರಿಶೀಲನೆಗಾಗಿ ಹೋದಾಗ ಅವರೂ ಕೂಡ ಈ ವರುಣನ ಆರ್ಭಟಕ್ಕೆ ನಲುಗುವಂತಾಯಿತು. ಎಲ್.ಬಿ ನಗರದ ಸಾಗರ್ ಎನ್ಕ್ಲೇವ್ ಕಾಲೋನಿಯಲ್ಲಿನ ಜನರ ಸಮಸ್ಯೆಗಳನ್ನು ಶಾಸಕರು ವಿಚಾರಿಸಿದರು. ಅಲ್ಲಿಂದ ಮತ್ತೊಂದು ಪ್ರದೇಶಕ್ಕೆ ಹೋಗುವಾಗ ಪ್ರವಾಹದ ನೀರಿನ ಹರಿವು ಹೆಚ್ಚಾಗಿದೆ. ನಂತರ ಅವರ ಕಾರು ಕೂಡಾ ನೀರಿನ ರಭಸಕ್ಕೆ ಸಿಲುಕಿಕೊಂಡಿತು.
ಹಯತ್‌ನಗರದಲ್ಲಿನ ಸರ್ಕಾರಿ ಕಚೇರಿಗಳಿಗೆ ನುಗ್ಗಿದ ನೀರು:
ಹಯತ್‌ನಗರದ ಆರ್‌ಟಿಸಿ ಬಸ್ ಡಿಪೋಗಳ ಸಮೀಪವಿರುವ ನ್ಯಾಯಾಲಯ ಮತ್ತು ಅಗ್ನಿಶಾಮಕ ಕೇಂದ್ರಗಳಿಗೆ ಮಳೆನೀರು ನುಗ್ಗಿದೆ. ಹಯತ್‌ನಗರ ಆರ್‌ಟಿಸಿ ಡಿಪೋ ಒಂದು ಕೆರೆಯಂತಾಗಿತ್ತು. ಬಸ್ಸುಗಳನ್ನು ಡಿಪೋದಿಂದ ಹೊರತೆಗೆಯಲು ಬಸ್ ಚಾಲಕರು ಈವರೆಗೂ ತೊಂದರೆ ಎದುರಿಸುತ್ತಿದ್ದಾರೆ. ಡಿಪೋದಲ್ಲಿದ್ದ ಡೀಸೆಲ್ ಬಂಕ್ ಅರ್ಧಕ್ಕಿಂತ ಹೆಚ್ಚು ಮುಳುಗಿದೆ.
ಇದನ್ನೂ ಓದಿ: ಕೊಡಗಿನಲ್ಲಿ ಧಾರಾಕಾರ ಮಳೆ: ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದ ವೃದ್ಧ ಶವವಾಗಿ ಪತ್ತೆ
ಪ್ರತಿವರ್ಷ ಅಧಿಕಾರಿಗಳು ಮಳೆಗಾಲದಲ್ಲಿ ಮಾತ್ರ ಇಲ್ಲಿಗೆ ಬರುತ್ತಾರೆ. ಆದರೆ, ಅವರು ಯಾವುದೇ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಮೂರು ದಿನಗಳ ಹಿಂದೆ ಎಲ್.ಬಿ ನಗರ ಎಂಎಲ್ಎ ಸುಧೀರ್ ರೆಡ್ಡಿ ಕಾಲೋನಿಗೆ ಭೇಟಿ ನೀಡಿದ್ದಾರೆ. ಅವರ ಭೇಟಿಯ ನಂತರ ಕೆಲವು ನಿರ್ಮಾಣ ಕಾರ್ಯಗಳು ಪ್ರಾರಂಭವಾಗಿವೆ. ಆದರೆ, ಈ ಭಾರಿ ಪ್ರವಾಹವನ್ನು ನಿಯಂತ್ರಿಸಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಸ್ಥಳೀಯರೊಬ್ಬರು ದೂರಿದರು.
ಹಾಗೆಯೇ ಎಲ್.ಬಿ ನಗರ ಕ್ಷೇತ್ರದ ಹಲವಾರು ಕಾಲೋನಿಗಳು ಧಾರಾಕಾರ ಮಳೆಯಿಂದ ಮುಳುಗಿವೆ. ಗಾಯತ್ರಿ ನಗರ ಹಂತ -1, ಹಂತ -2 ಸಂಪೂರ್ಣವಾಗಿ ಪ್ರವಾಹಕ್ಕೆ ಸಿಲುಕಿದೆ. ವನಸ್ತಲಿಪುರಂನ ಪ್ರಶಾಂತ್ ನಗರದಲ್ಲಿ ರಸ್ತೆಗೆ ಅಡ್ಡಲಾಗಿ ಒಂದು ದೊಡ್ಡ ಮರ ಬಿದ್ದಿದೆ.
ಇದನ್ನೂ ಓದಿ: Video: ಕರ್ನಾಟಕ, ಗುಜರಾತ್, ತೆಲಂಗಾಣದಲ್ಲಿ ವರುಣಾರ್ಭಟ, ಜನ ಜೀವನ ಅಸ್ತವ್ಯಸ್ತ!
ಹಯತ್ ನಗರದ ಪದ್ಮಾವತಿ ನಗರ ಕಾಲೋನಿ, ಬಂಜಾರ ಕಾಲೋನಿ, ಎಲ್.ಬಿ ನಗರದಲ್ಲಿ ರೆಡ್ಡಿ ಕಾಲೋನಿ ಮತ್ತು ನಾಗೋಲ್ನ ಅಯ್ಯಪ್ಪ ಕಾಲೋನಿ ಭಾರಿ ಪ್ರವಾಹಕ್ಕೆ ತುತ್ತಾಗಿವೆ. ಬಾಟಾ ಸಿಂಗರಂ ಗ್ರಾಮದಿಂದ ಅಬ್ದುಲ್ಲಾಪುರ್ಮೆಟ್ ವಲಯದ ಮಜೀದ್ಪುರ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಕಲ್ವರ್ಟ್‌ನಲ್ಲಿ ಭಾರಿ ಪ್ರವಾಹ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಜಿಬಿಎಂಸಿ ವಿಪತ್ತು ತಂಡಗಳು ಎಲ್ಬಿ ನಗರ ಮತ್ತು ಉಪ್ಪಲ್ ಕ್ಷೇತ್ರಗಳ ಅಡಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆ ನಡೆಸುತ್ತಿವೆ.
ಉಪ್ಪಲ್ನಲ್ಲಿ ಉಪನಗರಗಳೆಲ್ಲಾ ಜಲಾವೃತ:
ಉಪ್ಪಲ್, ರಾಮಂತಪುರ, ಹಬ್ಸಿಗುಡಾ, ಬೊಡುಪ್ಪಲ್, ಮೆಡಿಪಲ್ಲಿ, ಪೀರ್ಜಾಡಿಗುಡ, ಘಟ್ಕೇಸರ್, ಪೋಚಾರಂ ಮುಂತಾದ ಹಲವು ಕಾಲೋನಿಗಳು ಮುಳುಗಿದ್ದವು. ಭಮನಿ ನಗರ, ಭಾರತ್ ನಗರ, ಶ್ರೀನಗರ ಕಾಲೋನಿ ಮತ್ತು ರಾಮಂತಪುರದ ಬಾಲಕೃಷ್ಣ ನಗರ ಕಾಲೋನಿಯಲ್ಲಿ ಮನೆಗಳಲ್ಲಿ ಪ್ರವಾಹ ನೀರು ತುಂಬಿದೆ. ಎಸ್‌ಡಿಐ ಕಾಲೋನಿ, ಮಾರುತಿ ನಗರ, ದ್ವಾರಕಾ ನಗರ, ಅಂಜನೇಯ ನಗರ ಮತ್ತು ಬೋದುಪ್ಪಲ್ ಮುನ್ಸಿಪಲ್ ಕಾರ್ಪೊರೇಶನ್‌ನ ವ್ಯಾಪ್ತಿಯ ಗಾಯತ್ರಿ ನಗರ ಕಾಲೋನಿಗಳಲ್ಲಿನ ಜನರು ಭಾರೀ ಸಂಕಷ್ಟಕ್ಕೀಡಾಗಿದ್ದಾರೆ.