ನವದೆಹಲಿ: ಜಾಗತಿಕವಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಮುಂಬರುವ ಹಬ್ಬಗಳು ಮತ್ತು ಹೊಸ ವರ್ಷಾಚರಣೆ ದೃಷ್ಟಿಯಿಂದ ಸಾರ್ವಜನಿಕರು ಮಾಸ್ಕ್ ಧರಿಸುವುದು ಮತ್ತು ಹ್ಯಾಂಡ್ ಸ್ಯಾನಿಟೈಸರ್ ಬಳಸುವ ಬಗ್ಗೆ ಜಾಗೃತಿ ಮೂಡಿಸುವಂತೆ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೂಚಿಸಿದ್ದಾರೆ.
ಇಂದು ಲೋಕಸಭೆಯಲ್ಲಿ ಮಾತನಾಡಿದ ಅವರು, ವಿಶ್ವದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ಸೋಂಕು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ. ಜೊತೆಗೆ ಪ್ರತಿಯೊಂದು ದೇಶದ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ದೇಶದಲ್ಲಿ ಪ್ರತಿದಿನ ಸರಾಸರಿ 153 ಕೋವಿಡ್ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಪ್ರಪಂಚದಾದ್ಯಂತ ಪ್ರತಿದಿನ 5.87 ಲಕ್ಷ ಪ್ರಕರಣಗಳು ದೃಢಪಡುತ್ತಿವೆ ಎಂದು ತಿಳಿಸಿದ್ದಾರೆ.
ಮುಂಬರುವ ಹಬ್ಬಗಳು ಮತ್ತು ಹೊಸ ವರ್ಷದ ಆಚರಣೆಗಳನ್ನು ಗಮನದಲ್ಲಿಟ್ಟುಕೊಂಡು ಕೋವಿಡ್ ಸೂಕ್ತ ಮಾರ್ಗಸೂಚಿಯನ್ನು ಅನುಸರಿಸುವ ಬಗ್ಗೆ ಜನ ಸಮುದಾಯಕ್ಕೆ ಪರಿಣಾಮಕಾರಿ ಜಾಗೃತಿಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಗಮನ ಹರಿಸಬೇಕಾಗಿದೆ. ಸಾಮಾಜಿಕ ಅಂತರ ಅನುಸರಿಸುವುದರ ಜೊತೆಗೆ ಮಾಸ್ಕ್ ಬಳಕೆ, ಹ್ಯಾಂಡ್ ಸ್ಯಾನಿಟೈಸರ್ ಮತ್ತು ಉಸಿರಾಟದ ಸಮಸ್ಯೆ ಬಗ್ಗೆಯೂ ರಾಜ್ಯ ಗಮನ ಹರಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ಜನ ಸಮುದಾಯದೊಳಗೆ ಹೆಚ್ಚಿನ ಕಣ್ಗಾವಲು ಕೇಂದ್ರೀಕರಿಸಲು ಮತ್ತು ಅಗತ್ಯವಾದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಸೂಚಿಸಲಾಗಿದೆ ಎಂದಿರುವ ಮಾಂಡವಿಯಾ, ಹೊಸ ರೂಪಾಂತರಗಳು ಯಾವುದಾದರೂ ಇದ್ದರೆ ಅವುಗಳನ್ನು ಸಕಾಲಿಕವಾಗಿ ಪತ್ತೆಹಚ್ಚಲು ಎಲ್ಲ ಪಾಸಿಟಿವ್ ಪ್ರಕರಣಗಳ ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ ಎಂದು ವಿವರಿಸಿದರು.
ಕೋವಿಡ್ 19 ಲಸಿಕೆಯ ಮುನ್ನೆಚ್ಚರಿಕೆ ಡೋಸ್ ನೀಡುವುದನ್ನು ಹೆಚ್ಚಿಸಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವುದನ್ನು ರಾಜ್ಯಗಳು ಖಚಿತಪಡಿಸಿಕೊಳ್ಳಬೇಕು. ದೇಶಕ್ಕೆ ಯಾವುದೇ ಹೊಸ ರೂಪಾಂತರದ ಅಪಾಯವನ್ನು ಕಡಿಮೆ ಮಾಡಲು ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಗುರುವಾರದಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ರ‍್ಯಾಂಡಮ್ ಟೆಸ್ಟ್ ದುಪ್ಪಟ್ಟು ಮಾಡಲಾಗಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದರು.
ಇದನ್ನೂ ಓದಿ: ಕೊರೊನಾ ಭೀತಿ: ರಾಜಸ್ಥಾನದಲ್ಲಿ ಜನಾಕ್ರೋಶ ಯಾತ್ರೆ ಸ್ಥಗಿತಗೊಳಿಸಿದ ಬಿಜೆಪಿ