ಹೈದರಾಬಾದ್: ಕೊರೊನಾ ಕಾಲಘಟ್ಟದ ನಂತರ ಆರೋಗ್ಯ ವಿಮೆಯ ಮಹತ್ವ ಎಷ್ಟಿದೆ ಎಂಬುದು ಬಹುತೇಕ ಎಲ್ಲರ ಅರಿವಿಗೆ ಬಂದಂತಿದೆ. ಆದಾಗ್ಯೂ ಆರೋಗ್ಯ ವಿಮೆಯ ಬಗ್ಗೆ ಜನರ ಮನಸಿನಲ್ಲಿ ಇನ್ನೂ ಹಲವಾರು ತಪ್ಪು ಕಲ್ಪನೆಗಳಿವೆ. ಅನಾರೋಗ್ಯದ ನಂತರ ಆರೋಗ್ಯ ವಿಮೆ ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಅನಾರೋಗ್ಯ ಬರುವ ಬಹಳ ಮುಂಚಿತವಾಗಿ ಎಚ್ಚರಿಕೆ ತೆಗೆದುಕೊಳ್ಳಬೇಕು. ವಿಮೆಯು ಅನಾರೋಗ್ಯದ ಸಮಯದಲ್ಲಿ ಮಾತ್ರವಲ್ಲದೇ ಅನಿರೀಕ್ಷಿತ ಅಪಘಾತಗಳ ಸಮಯದಲ್ಲೂ ನಿಮ್ಮ ರಕ್ಷಣೆಗೆ ಬರುತ್ತದೆ.
ಎಲ್ಲಿಯವರೆಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯ ಬರುವುದಿಲ್ಲವೋ ಅಲ್ಲಿಯವರೆಗೆ ಪ್ರೀಮಿಯಂ ಪಾವತಿಸುವುದು ವ್ಯರ್ಥ ಎಂಬ ಭಾವನೆ ಹಲವರದ್ದು. ಆದರೆ, ಪ್ರತಿಯೊಬ್ಬರೂ ಆರೋಗ್ಯ ವಿಮೆಯನ್ನು ಹೊಂದಿರಬೇಕು ಮತ್ತು ಇದು ಆರಂಭಿಕ ದಿನಗಳಿಂದಲೇ ಪ್ರಾರಂಭವಾಗಬೇಕು.
ಹಾಗಂತ ಕ್ಲೈಮ್ ಮಾಡುವ ಪರಿಸ್ಥಿತಿ ಬರುವುದನ್ನು ಯಾರೂ ಬಯಸುವುದಿಲ್ಲ. ಆದರೆ, ಅಂಥ ಸಂದರ್ಭ ಎದುರಾದಲ್ಲಿ ವಿಮೆ ಕ್ಲೈಮ್ ಮಾಡುವ ಸ್ಥಿತಿಯಲ್ಲಿರಬೇಕು. ಅನಾವಶ್ಯಕ ಆರ್ಥಿಕ ಬಿಕ್ಕಟ್ಟನ್ನು ಜಾಣತನದಿಂದ ತಪ್ಪಿಸಬೇಕು.
ವಿಮೆ ಪಡೆಯುವ ಮುನ್ನ ಪರಿಶೀಲಿಸುವುದು ಒಳ್ಳೆಯದು: ವಿಮೆ ಪಡೆಯುವ ಮುನ್ನ, ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಆರೋಗ್ಯ ವಿಮಾ ಸಂಸ್ಥೆಗಳು ಎಷ್ಟು ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಪರಿಶೀಲಿಸುವುದು ಬಹಳ ಅಗತ್ಯ. ಕಡಿಮೆ ಪ್ರೀಮಿಯಂ ಪಾವತಿಯ ವಿಮಾ ಕವರೇಜ್ನಲ್ಲಿ ಕೆಲವು ಷರತ್ತು, ಉಪ ಮಿತಿಗಳು, ಕೋ ಪೇಮೆಂಟ್ ಇನ್ನೂ ಮುಂತಾದ ನಿಬಂಧನೆಗಳಿರುತ್ತವೆ. ಹೀಗಾಗಿ ವಿಮೆ ಪಡೆದವರು ಆಸ್ಪತ್ರೆಯ ವೆಚ್ಚದ ಕೆಲ ಭಾಗವನ್ನು ಪಾವತಿಸಬೇಕಾಗುತ್ತದೆ. ಹೀಗಾಗಿಯೇ ಒಬ್ಬರು ತಮಗೆ ಸೂಕ್ತವಾದ ಆರೋಗ್ಯ ವಿಮೆ ಪಡೆದುಕೊಳ್ಳಬೇಕು. ಇದನ್ನು ಖಂಡಿತವಾಗಿಯೂ ಹೊರೆ ಎಂದು ಭಾವಿಸಬಾರದು.
ಆರೋಗ್ಯ ವಿಮೆ ಜೀವ ವಿಮೆಯಂತಲ್ಲ: ಟರ್ಮ್ ಲೈಫ್ ಕವರ್‌ಗಳು ಕಡಿಮೆ ಪ್ರೀಮಿಯಂನೊಂದಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತದೆ. ಆದರೆ ಇದೇ ಮಾದರಿಯನ್ನು ಆರೋಗ್ಯ ವಿಮಾ ಕವರ್‌ಗಳಿಗೆ ಅನ್ವಯಿಸಲಾಗುವುದಿಲ್ಲ. ಸೂಕ್ತವಾದ ಆರೋಗ್ಯ ವಿಮೆಯನ್ನು ತೆಗೆದುಕೊಳ್ಳದಿದ್ದರೆ ಹೆಚ್ಚುವರಿ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಆಗ ಅದು ಭರಿಸಲಾಗದ ಹೆಚ್ಚುವರಿ ಹೊರೆಯಾಗುತ್ತದೆ. ಇದಲ್ಲದೇ, ಯಾವುದೇ ಎರಡು ಕಂಪನಿಗಳ ಪಾಲಿಸಿಗಳನ್ನು ಕೇವಲ ಪ್ರೀಮಿಯಂ ಆಧಾರದ ಮೇಲೆ ಹೋಲಿಸಲು ಸಾಧ್ಯವಿಲ್ಲ.
ಇಂದಿನ ಅನಿಶ್ಚಿತತೆಯ ದಿನಮಾನಗಳಲ್ಲಿ ವೃತ್ತಿಪರರು ಆಗಾಗ್ಗೆ ಉದ್ಯೋಗಗಳನ್ನು ಬದಲಾಯಿಸುತ್ತಿರುತ್ತಾರೆ. ಕೆಲವರು ತಮ್ಮ ಪ್ರಸ್ತುತ ವೃತ್ತಿಯನ್ನು ತೊರೆದು ತಮ್ಮ ಆಸಕ್ತಿಗಳು ಮತ್ತು ಆದ್ಯತೆಯ ಜೀವನಶೈಲಿಗೆ ಸರಿಹೊಂದುವ ಉದ್ಯೋಗಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಅಂಥ ವ್ಯಕ್ತಿಗಳು ತಮ್ಮ ಕಂಪನಿಗಳು ಒದಗಿಸುವ ಗ್ರೂಪ್ ಇನ್ಸೂರೆನ್ಸ್ ಪಾಲಿಸಿಯ ಜೊತೆಗೆ ಪ್ರತ್ಯೇಕ ಆರೋಗ್ಯ ವಿಮೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು.
ಇತ್ತೀಚಿನ ದಿನಗಳಲ್ಲಿ ಕಂಪನಿಗಳು 60 ವಿಧದ ಗಂಭೀರ ಕಾಯಿಲೆಗಳನ್ನು ಕವರ್ ಮಾಡುವ ಪಾಲಿಸಿಗಳನ್ನು ನೀಡುತ್ತಿವೆ. ಇವು ಕ್ಯಾನ್ಸರ್, ಹೃದಯಾಘಾತ, ಮೂತ್ರಪಿಂಡ ವೈಫಲ್ಯ, ಅಂಗಾಂಗ ಕಸಿ, ಪಾರ್ಶ್ವವಾಯು ಮುಂತಾದವುಗಳಿಗೆ ಅನ್ವಯಿಸುತ್ತವೆ. ಕೆಲವು ಪಾಲಿಸಿಗಳು 1 ಕೋಟಿ ರೂಪಾಯಿಗಳವರೆಗೆ ಕವರ್ ನೀಡುತ್ತಿವೆ. ಸಾಮಾನ್ಯವಾಗಿ, ಆರೋಗ್ಯ ಪಾಲಿಸಿಗಳು ಕೇವಲ 8 ರಿಂದ 20 ರೋಗಗಳನ್ನು ಒಳಗೊಂಡಿರುತ್ತವೆ. ಪಾಲಿಸಿ ಮೊತ್ತವನ್ನು ಆಸ್ಪತ್ರೆಗೆ ದಾಖಲು ಮತ್ತು ಚಿಕಿತ್ಸೆಯ ವೆಚ್ಚಗಳಿಗೆ ಪಾವತಿಸಲಾಗುತ್ತದೆ.
ಪಾಲಿಸಿ ಕೊಳ್ಳುವ ಮುನ್ನ ಷರತ್ತುಗಳನ್ನೊಮ್ಮೆ ನೋಡಿ: ಪಾಲಿಸಿಯನ್ನು ತೆಗೆದುಕೊಳ್ಳುವ ಮೊದಲು ನಿಯಮಗಳು ಮತ್ತು ಷರತ್ತುಗಳು, ವಿನಾಯಿತಿಗಳು ಮತ್ತು ಉಪ ಮಿತಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಈ ಬಗ್ಗೆ ಯಾವುದೇ ಗೊಂದಲಗಳಿದ್ದಲ್ಲಿ ವಿಮಾ ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಕುಟುಂಬ ವೈದ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ರೋಗಿಯು ಅನಾರೋಗ್ಯಕ್ಕೆ ಒಳಗಾದ ನಂತರ 30 ರಿಂದ 90 ದಿನಗಳವರೆಗೆ ಬದುಕಿದರೆ ಮಾತ್ರ ಕ್ಲೈಮ್ ನೀಡಲಾಗುವುದು ಎಂಬಂಥ ಷರತ್ತುಗಳಿರುವ ವಿಮಾ ಪಾಲಿಸಿಗಳ ಬಗ್ಗೆ ಭಾರಿ ಎಚ್ಚರಿಕೆಯಿಂದ ಇರಬೇಕು.
ಇದನ್ನೂ ಓದಿ: ಏನಿದು ಹೊಸ ಜೀರೊ ಕಾಸ್ಟ್ ಟರ್ಮ್ ಇನ್ಸೂರೆನ್ಸ್ ಪಾಲಿಸಿ? ಪ್ರಯೋಜನಗಳೇನು?