ಕೈತಾಲ್, ಹರಿಯಾಣ : ಜಿಲ್ಲೆಯಲ್ಲಿ ವೈದ್ಯರ ನಿರ್ಲಕ್ಷ್ಯ ಬಯಲಿಗೆ ಬಂದಿದೆ. ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸ್ಥಿತಿ ಚಿಂತಾಜನಕವಾಗಿದ್ದು, ಸುಮಾರು 15 ದಿನಗಳವರೆಗೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ ನವಜಾತ ಶಿಶು ಮೃತಪಟ್ಟಿದೆ. ವೈದ್ಯರ ನಿರ್ಲಕ್ಷ್ಯದ ವಿರುದ್ಧ ರೋಗಿಯ ಸಂಬಂಧಿಕರು ದೂರು ದಾಖಲಿಸಿದ್ದಾರೆ.
ಆಗಸ್ಟ್ 2 ರಂದು ಹರಿಯಾಣದ ಕ್ರೋರಾ ಗ್ರಾಮದಲ್ಲಿ ವಾಸಿಸುತ್ತಿದ್ದ ಗರ್ಭಿಣಿಯನ್ನು ಹೆರಿಗೆಗಾಗಿ ಕೈತಾಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆರಿಗೆಗೂ ಮುನ್ನ ವೈದ್ಯರು ಕುಟುಂಬಕ್ಕೆ ನಾರ್ಮಲ್ ಡೆಲಿವರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಹೆರಿಗೆ ವೇಳೆ ವೈದ್ಯರು ಮಹಿಳೆಯ ಖಾಸಗಿ ಭಾಗದಲ್ಲಿ ಹತ್ತಿ ಬಿಟ್ಟಿದ್ದು, ತೆಗೆಯಲು ಮರೆತಿದ್ದಾರೆ.
ಅಷ್ಟೇ ಅಲ್ಲ ಹೆರಿಗೆ ವೇಳೆ ಮಗು ಹೊರ ಬರಲು ಸಿಬ್ಬಂದಿ ಮಹಿಳೆಯ ಹೊಟ್ಟೆಯನ್ನು ಬಲವಾಗಿ ಒತ್ತಿದ್ದಾರೆ. ಇದರಿಂದಾಗಿ ಮಗು ಅಸ್ವಸ್ಥಗೊಂಡಿದ್ದು, ಐಸಿಯುವಿನಲ್ಲಿಟ್ಟು ಚಿಕತ್ಸೆ ನೀಡಲಾಗುತ್ತಿತ್ತು. ಇತ್ತ ಕೆಲ ದಿನಗಳ ಬಳಿಕ ಮಹಿಳೆಗೆ ನೋವು ಹೆಚ್ಚಾಗಿದ್ದು, ಈ ವಿಷಯನ್ನು ಮಹಿಳೆ ತನ್ನ ಪತಿಗೆ ತಿಳಿಸಿದ್ದಾರೆ.
ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಕುಟುಂಬಸ್ಥರು ಹಲವಾರು ಬಾರಿ ತೋರಿಸಲು ಅದೇ ಆಸ್ಪತ್ರೆಗೆ ಕರೆದೊಯ್ದಿದ್ದು, ಈ ವೇಳೆ ಮಹಿಳೆ ಸಂಪೂರ್ಣವಾಗಿ ಆರೋಗ್ಯವಾಗಿದ್ದಾಳೆ ಎಂದು ವೈದ್ಯರು ವಾಪಸ್ ಕಳುಹಿಸಿದ್ದರು. ಮಹಿಳೆಯ ನೋವನ್ನು ನೋಡಿದ ಕುಟುಂಬಸ್ಥರು ಆಕೆಯನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ತೋರಿಸಿದ್ದಾರೆ.
ಖಾಸಗಿ ಆಸ್ಪತ್ರೆಯ ವೈದ್ಯರು ಮಹಿಳೆಯ ತಪಾಸಣೆ ನಡೆಸಿದಾಗ ಹೆರಿಗೆ ಮಾಡಿದ ವೈದ್ಯರು ಹತ್ತಿ ಅಲ್ಲೇ ಬಿಟ್ಟು ಹೋಗಿರುವುದು ಪತ್ತೆಯಾಗಿದೆ. ಇದಾದ ನಂತರ ವೈದ್ಯರು ಮಹಿಳೆಯ ಖಾಸಗಿ ಭಾಗದಿಂದ ಹತ್ತಿಯನ್ನು ತೆಗೆದಿದ್ದಾರೆ. ಸುಮಾರು ಹತ್ತಾರು ದಿನಗಳಿಂದ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ಕೊನೆಗೂ ಬದುಕುಳಿಯಲಿಲ್ಲ.
ಓದಿ: ಸಹಜ ಹೆರಿಗೆಗೆ ಫೇಮಸ್ ಕೋಲಾರದ ಈ ಸರ್ಕಾರಿ ಆಸ್ಪತ್ರೆ: ತಿಂಗಳಿಗೆ 60ಕ್ಕೂ ಹೆಚ್ಚು ಡೆಲಿವರಿ
ಕೈತಾಳದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ತಾಯಿಯ ಸ್ಥಿತಿ ಚಿಂತಾಜನಕವಾಗಿದ್ದು, ಮುದ್ದಾದ ಮಗು ಮೃತಪಟ್ಟಿದೆ. ಅಮಾಯಕರ ಪ್ರಾಣದ ಜೊತೆ ವೈದ್ಯರು ಚೆಲ್ಲಾಟವಾಡದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತೆಯ ಸಂಬಂಧಿಕರು ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಆಸ್ಪತ್ರೆಯ ವೈದ್ಯ ಎಸ್‌ಪಿ ಸಿಂಗ್, ಮೊದಲಿಗೆ ಅವರು ಆಸ್ಪತ್ರೆಯಲ್ಲಿ ಮಹಿಳೆಗೆ ಹೆರಿಗೆಯಾದ ಸಂಗತಿಯನ್ನು ನಿರಾಕರಿಸಿದರು. ಡಿಸ್ಚಾರ್ಜ್ ಸ್ಲಿಪ್ ಅನ್ನು ಸಂಬಂಧಿಕರು ಅವರಿಗೆ ತೋರಿಸಿದಾಗ ಕುಟುಂಬಸ್ಥರು ಮಾಡಿದ ಎಲ್ಲ ಆರೋಪಗಳು ಸುಳ್ಳು ಎಂದು ಹೇಳಿದರು. ಇನ್ನು ಆಸ್ಪತ್ರೆಯ ವೈದ್ಯರ ವಿರುದ್ಧ ಸಂತ್ರಸ್ತೆಯ ಸಂಬಂಧಿಕರು ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಒಟ್ಟಿನಲ್ಲಿ ಹರಿಯಾಣ ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಬಲಿಯಾಗಿದ್ದು, ತಾಯಿ ಸ್ಥಿತಿ ಚಿಂತಾಜನಕವಾಗಿದೆ. ಅಮಾಯಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ವೈದ್ಯರಿಗೆ ಶಿಕ್ಷೆಯಾಗುತ್ತಾ ಎಂಬುದು ಕಾದುನೋಡ್ಬೇಕಾಗಿದೆ.
ಓದಿ: ಹೆರಿಗೆ ವೇಳೆ ಮಗು ಸಾವು.. ಬಿಮ್ಸ್ ಆಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ, ಪ್ರತಿಭಟನೆ