ನವದೆಹಲಿ(ಮಂಗಳೂರು): 'ನಾನೊಬ್ಬ ದೇಶದ ಸಾಮಾನ್ಯ ಪ್ರಜೆ. ನನ್ನ ಕಾರ್ಯ ಮೆಚ್ಚಿ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಧನ್ಯವಾದ ಹೇಳುತ್ತೇನೆ' ಎಂದು ಪದ್ಮಶ್ರೀ ಪ್ರಶಸ್ತಿ ಪರಸ್ಕೃತ ಹರೇಕಳ ಹಾಜಬ್ಬ ಹೇಳಿದ್ದಾರೆ.
'ನಾನು ಅಕ್ಷರ ಕಲಿಯದ ವ್ಯಕ್ತಿ':
ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, 'ನಾನು ವಿದ್ಯಾಭ್ಯಾಸ ಮಾಡದ ವ್ಯಕ್ತಿ. ಬಡತನ ನನ್ನನ್ನು ಓದಲು ಬಿಡಲಿಲ್ಲ. ಕಿತ್ತಲೆ ಹಣ್ಣು ಮಾರಿ ಜೀವನ ನಡೆಸಿಕೊಂಡು ಬಂದ ಸಾಮಾನ್ಯ ಮನುಷ್ಯ. ಕಿತ್ತಳೆ ಹಣ್ಣು ಕೇಳುವಾಗ ಹೌ ಮಚ್ ಎಂದು ಕೇಳುವಾಗ ನನಗೆ ಅವರೇನು ಕೇಳುತ್ತಿದ್ದಾರೆಂದು ಅರ್ಥವೇ ಆಗುತ್ತಿರಲಿಲ್ಲ. ಅಕ್ಷರ ಕಲಿಯದಿದ್ದರೆ ಮುಜುಗರ ಅನುಭವಿಸಬೇಕಾಗುತ್ತದೆ ಎಂದು ಅರ್ಥವಾಯಿತು. ನನ್ನಂತೆ ಮಕ್ಕಳು ಶಿಕ್ಷಣದಿಂದ ದೂರವಾಗಬಾರದು ಎಂದು ತಿಳಿದು ಗ್ರಾಮದಲ್ಲಿ ಒಂದು ಸರ್ಕಾರಿ ಶಾಲೆ ತೆರೆಯಬೇಕೆಂಬ ನಿರ್ಧಾರ ಮಾಡಿದೆ. ನನ್ನ ಕ್ಷೇತ್ರದ ಶಾಸಕರಾಗಿದ್ದ ಆಗಿನ ಎ.ಟಿ.ಫರೀದ್ ಅವರು ನನ್ನ ಆಸೆಯಂತೆ 2000ರಲ್ಲಿ ಸರ್ಕಾರಿ ಶಾಲೆಯನ್ನು ಮಂಜೂರಾತಿ ಮಾಡಿಕೊಟ್ಟರು'.
'ಅಲ್ಲಿಂದ ಪ್ರಾರಂಭವಾದ 20 ಮಕ್ಕಳಿದ್ದ ಶಾಲೆ ಈಗ 170ಕ್ಕೆ ತಲುಪಿದೆ. ಎಲ್ಲರ ಸಹಕಾರದಿಂದ ಬೆಳೆದಿದೆ. ನನಗಾಗಿ ಅರಸಿ ಬಂದ ಪ್ರಶಸ್ತಿಗಳ ಮೊತ್ತ, ಹಲವು ದಾನಿಗಳು ಕೊಟ್ಟ ಹಣವನ್ನು ಈ ಶಾಲೆಗೆ ನೀಡಿದ್ದೇನೆ. ಈಗ ನನ್ನ ಹಳ್ಳಿಯಲ್ಲಿ ಪಿಯು ಕಾಲೇಜು ಆಗಬೇಕು ಅನ್ನೋದು ನನ್ನ ಕನಸು. ಇದಕ್ಕೆ ಬೇಕಾಗುವಂತಹ ಹಣಕಾಸಿನ ವ್ಯವಸ್ಥೆಯನ್ನು ಪ್ರಧಾನಮಂತ್ರಿ ನೀಡಿದರೆ ಉಪಕಾರವಾಗುತ್ತದೆ' ಎಂದು ತಮ್ಮ ಮುಂದಿನ ಆಕಾಂಕ್ಷೆ ವ್ಯಕ್ತಪಡಿಸಿದರು.
'ನಾನು ಯೋಗ್ಯತೆ ಇಲ್ಲದ ಮನುಷ್ಯ':
ಇದೇ ವೇಳೆ ಮಾಧ್ಯಮದ ಮುಂದೆ ತನ್ನ ಬದುಕು ವಿವರಿಸಿದ ಹಾಜಬ್ಬ, 'ನಾನು ರಾಷ್ಟ್ರಪತಿ ಭವನದಲ್ಲಿ ಉಳಿದುಕೊಳ್ಳಲು ಯೋಗ್ಯತೆ ಇಲ್ಲದ ಮನುಷ್ಯ. ಸರ್ಕಾರ ನನ್ನಂತಹ ವ್ಯಕ್ತಿಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿದೆ. ಇದರಲ್ಲಿ ಮಾಧ್ಯಮದ ಪಾತ್ರವೂ ಬಹಳ ದೊಡ್ಡದಿದೆ. ಎಲ್ಲರೂ ಸೇರಿ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ' ಎಂದು ತಮಗೆ ಸಹಾಯ ಮಾಡಿದ ಸಂಘ-ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳಿಗೆ ಧನ್ಯವಾದ ತಿಳಿಸಿದರು.
ಹರೇಕಳ ಹಾಜಬ್ಬ ಅವರು ತಮ್ಮ ನೆಚ್ಚಿನ ಉಡುಪು ಪಂಚೆ-ಶರ್ಟ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಷ್ಟ್ರಪತಿ ಭವನದಲ್ಲಿ ಶ್ರೀಸಾಮಾನ್ಯರಿಗಿಂತಲೂ ಸಾಮಾನ್ಯ ವ್ಯಕ್ತಿಯಾಗಿ ಅವರು ಗಮನ ಸೆಳೆದರು. ಬರಿಗಾಲಲ್ಲೇ ಪ್ರಶಸ್ತಿ ಸ್ವೀಕರಿಸಲು ಬಂದ ಹಾಜಬ್ಬ ಅವರ ಸರಳತೆ ಕಂಡು ಇಲ್ಲಿದ್ದವರೆ ಅರೆಕ್ಷಣ ಅಚ್ಚರಿಗೊಳದಾದರು. ನಡು ಬಗ್ಗಿಸಿ ಕೈಮುಗಿದುಕೊಂಡೇ ಬಂದ ಅವರು ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದರು. ಹಾಜಬ್ಬನವರ ಸರಳತೆ ಕಂಡು ರಾಷ್ಟ್ರಪತಿಗಳೂ ಕೂಡ ಅಚ್ಚರಿಗೊಳಗಾದರು.
ಕಿತ್ತಳೆ ಹಣ್ಣು ವ್ಯಾಪಾರ:
ಮಂಗಳೂರು ನಗರದಲ್ಲಿ ಕಿತ್ತಳೆ ಹಣ್ಣು ವ್ಯಾಪಾರ ಮಾಡುತ್ತಾ ಅದರಿಂದ ಬಂದ ಹಣವನ್ನು ಒಟ್ಟುಗೂಡಿಸಿ ಹರೇಕಳ ಹಾಜಬ್ಬ ತಮ್ಮ ಊರಿನಲ್ಲಿ ಶಾಲೆ ತೆರೆದಿದ್ದರು. ಅಷ್ಟೇ ಅಲ್ಲದೆ, ಊರಿನಲ್ಲಿ ಶಾಲೆ ಪ್ರಾರಂಭಿಸಲು ಸಾಕಷ್ಟು ಶ್ರಮಪಟ್ಟಿದ್ದರು. ಅವರ ಈ ಸಾಧನೆ ಹಾಗೂ ಪಟ್ಟ ಪ್ರಾಮಾಣಿಕ ಪ್ರಯತ್ನವನ್ನು ಗುರುತಿಸಿ ಕೇಂದ್ರ ಸರ್ಕಾರವು 2020 ರ ಜನವರಿ 25 ರಂದು ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಿತ್ತು. ಇವರ ಸರಳತೆ ಹಾಗೂ ಸಾಧನೆ ಕಂಡು ದೆಹಲಿಯ ಸಿಎನ್‍ಎನ್- ಐಬಿಎನ್ ರಿಯಲ್ ಹೀರೋ ಪ್ರಶಸ್ತಿ ನೀಡಿ ಗೌರವಿಸಿತ್ತು.
ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ:
ಇನ್ನು, ಹರೇಕಳ ಹಾಜಬ್ಬನವರೂ ಸಹಿತ 9 ಮಂದಿಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಗೌರವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.