ಅಹಮದಾಬಾದ್ (ಗುಜರಾತ್) : ಹತ್ತು ದಿನಗಳ ಹಿಂದೆಷ್ಟೇ ಕಾಂಗ್ರೆಸ್ನಿಂದ ಹೊರ ಬಂದಿರುವ ಗುಜರಾತ್ನ ಯುವ ಹೋರಾಟಗಾರ, ಪಾಟಿದಾರ್ ಅನಾಮತ್ ಆಂದೋಲನ ಸಮಿತಿ (ಪಿಎಎಎಸ್) ಸಂಚಾಲಕ ಹಾರ್ದಿಕ್ ಪಟೇಲ್ ಬಿಜೆಪಿ ಸೇರಲು ಮುಂದಾಗಿದ್ದಾರೆ. ಗಾಂಧಿನಗರದಲ್ಲಿ ಮೇ 30 ಅಥವಾ ಮೇ 31ರಂದು ಕಮಲ ಪಕ್ಷದ ಬಾವುಟ ಹಿಡಿಯುವ ಸಾಧ್ಯತೆ ಇದ್ದು, ಈ ಬಗ್ಗೆ ಅವರೇ ಸುಳಿವು ನೀಡಿದ್ದಾರೆ. ಅಷ್ಟೇ ಅಲ್ಲ, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವನ್ನೂ ಕೂಡ ಕೊಟ್ಟಿದ್ದಾರೆ.
ಗುಜರಾತ್ ಕಾಂಗ್ರೆಸ್ನ ಕಾರ್ಯಾಧ್ಯಕ್ಷರಾಗಿದ್ದ ಹಾರ್ದಿಕ್ ಪಟೇಲ್ ಮೇ 18ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದ ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳು ಎದ್ದಿದ್ದವು. ಇದೀಗ ಟಿವಿ ವಾಹಿನಿಯೊಂದರ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಅವರು, ಬಿಜೆಪಿಗೆ ಸೇರುವ ಸುಳಿವು ನೀಡಿದ್ದಾರೆ. ಜೊತೆಗೆ ಸೋಮನಾಥ ದೇಗುಲದಿಂದ ಏಕತಾ ಪ್ರತಿಮೆಯವರೆಗೆ ಏಕತಾ ಯಾತ್ರೆಯನ್ನು ನಡೆಸಲಿದ್ದೇನೆ ಎಂದು ಹೇಳಿದ್ದಾರೆ.
ಇತ್ತ, ಹಾರ್ದಿಕ್ ಪಟೇಲ್ ಅವರನ್ನು ಬರ ಮಾಡಿಕೊಳ್ಳಲು ಬಿಜೆಪಿ ಅದ್ಧೂರಿ ಕಾರ್ಯಕ್ರಮ ಏರ್ಪಡಿಸಲು ಮುಂದಾಗಿದೆ. ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಅಥವಾ ಗಾಂಧಿನಗರದಲ್ಲಿ ಗುಜರಾತ್ ಬಿಜೆಪಿ ಉಸ್ತುವಾರಿ ಭೂಪೇಂದರ್ ಯಾದವ್ ಅಥವಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಮ್ಮುಖದಲ್ಲಿ ಸೇರುವ ಎರಡು ಆಯ್ಕೆಗಳನ್ನು ನೀಡಲಾಗಿದೆ.
ಅವರು ಎರಡನೆಯದನ್ನು ಆಯ್ಕೆ ಮಾಡಿದ್ದಾರೆ. ಅಂದು ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಲು ಸಹ ಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಜ್ಞಾನವಾಪಿ ಸಮೀಕ್ಷೆ ವಿಡಿಯೋ ದೃಶ್ಯ ಹಂಚಿಕೊಳ್ಳದಂತೆ ವಿಶ್ವ ವೈದಿಕ್ ಸನಾತನ ಸಂಘ ಒತ್ತಾಯ