ಮುಂಬೈ: ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ನಡುವಿನ ಯುದ್ಧ ಇಂದಿಗೆ 6ನೇ ದಿನಕ್ಕೆ ಕಾಲಿಟ್ಟಿದ್ದು, ಎರಡೂ ಕಡೆಗಳಲ್ಲಿ ಸಾವು ನೋವುಗಳು ಆಗುತ್ತಿವೆ. ಇದುವರೆಗೂ 2,200ಕ್ಕೂ ಹೆಚ್ಚು ಸಾವುಗಳಾಗಿವೆ ಎಂದು ವರದಿಯಾಗಿದೆ. ಶನಿವಾರ ಆರಂಭವಾದ ಇಸ್ರೇಲ್ ಮೇಲೆ ಹಮಾಸ್ ದಾಳಿಯಿಂದ 155 ಸೈನಿಕರು ಸೇರಿದಂತೆ 1200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.
ಗಾಜಾದಲ್ಲಿ 260 ಮಕ್ಕಳು, 230 ಮಹಿಳೆಯರು ಸೇರಿದಂತೆ 1,050 ಜನರು ಸಾವನ್ನಪ್ಪಿದ್ದು, 5100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ವಿಶ್ವಸಂಸ್ಥೆಯ ಪ್ಯಾಲೆಸ್ಟೀನಿಯನ್ ನಿರಾಶ್ರಿತರ ಸಂಸ್ಥೆ ಗಾಜಾದಲ್ಲಿ 2,50,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಈ ದಾಳಿ ಹಾಗೂ ಸಾವು ನೋವುಗಳ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಮಿಡ್ವೆಸ್ಟ್ ಇಂಡಿಯಾದ ಇಸ್ರೇಲ್ ಕಾನ್ಸುಲ್ ಜನರಲ್ ಕೊಬ್ಬಿ ಶೋಶನಿ ಇಸ್ರೇಲ್ ಮೇಲೆ ದಾಳಿ ಮಾಡಿರುವ ಹಮಾಸ್ ಗುಂಪಿನ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ. ಜೊತೆಗೆ ಇಸ್ರೇಲ್ಗೆ ಬೆಂಬಲ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತಕ್ಕೆ ಧನ್ಯವಾಗಳನ್ನು ಅರ್ಪಿಸಿದ್ದಾರೆ.
"ಹಮಾಸ್ ಗುಂಪಿನವರು ಮಾಡಿದ್ದು ಮಾನವೀಯತೆಯ ವಿರುದ್ಧದ ಅಪರಾಧ. ಕಳೆದ ಕೆಲವು ದಿನಗಳಲ್ಲಿ ನಾವು ನೋಡಿದ್ದು ನೈತಿಕ ಮತ್ತು ಪ್ರಜಾಸತ್ತಾತ್ಮಕ ರಾಜ್ಯ ಮತ್ತು ಪ್ರಜಾಸತ್ತಾತ್ಮಕವಲ್ಲದ, ಹಿಂಸಾತ್ಮಕ ಮತ್ತು ಭಯೋತ್ಪಾದಕ ರಾಷ್ಟ್ರಗಳ ನಡುವಿನ ವ್ಯತ್ಯಾಸವೇನು ಎಂಬುದನ್ನು ಪ್ರಧಾನಿ ಮೋದಿ ಮಾಡಿದ ಘೋಷಣೆ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇಸ್ರೇಲ್ ಅನ್ನು ಬೆಂಬಲಿಸಿದ್ದಕ್ಕಾಗಿ ನಾನು ಭಾರತಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ" ಎಂದು ಅವರು ಹೇಳಿದರು.
ಸದ್ಯ ನಡೆಯುತ್ತಿರುವ ಯುದ್ಧದ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಟೀಕೆಗಳ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಇಸ್ರೇಲಿ ರಾಯಭಾರಿ ಮಕ್ಕಳು, ಮಹಿಳೆಯರು, ವೃದ್ಧರನ್ನು ಅಮಾನವೀಯವಾಗಿ ಹತ್ಯೆ ಮಾಡುತ್ತಿರುವವರ ವಿರುದ್ಧ ಸ್ಪಷ್ಟವಾದ ಧ್ವನಿಯನ್ನು ಎತ್ತದಿರುವ ರಷ್ಯಾ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.
"ಇದಕ್ಕೂ ಈಗಿನ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಇದು ಮಾನವೀಯತೆಯ ವಿರುದ್ಧದ ಅಪರಾಧ. ಇದು ಯುದ್ಧ, ಮುಸ್ಲಿಂ ಜಗತ್ತು ಸೇರಿದಂತೆ ಎಲ್ಲರೂ ಒಗ್ಗೂಡಿ ಖಂಡಿಸಬೇಕಾಗಿದೆ. ಅಮಾನವೀಯವಾಗಿ ದಾಳಿ ನಡೆಸುತ್ತಿರುವವರು ಎರಡು ಕಾಲಿನ ಪ್ರಾಣಿಗಳು. ಅದನ್ನು ನಾನು ವಿವರಿಸಲು ಸಹ ಸಾಧ್ಯವಿಲ್ಲ. ಇಸ್ರೇಲ್ ಮೇಲೆ ಹಮಾಸ್ ದಾಳಿಯಲ್ಲಿ ಇರಾನ್ ಹಾಗೂ ಹಿಜ್ಬುಲ್ಲಾದ ಕೆಲವು ಅಪರಿಚಿತ ಸದಸ್ಯರು ಪರೋಕ್ಷವಾಗಿ ಭಾಗಿಯಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗಾಜಾದಲ್ಲಿ ಬಾಂಬ್ ದಾಳಿಗೊಳಗಾದ ಮನೆಗಳ ನಾಗರಿಕರಿಗೆ ಇಸ್ರೇಲ್ ಆಶ್ರಯ ನೀಡುತ್ತದೆಯೇ ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಶೋಶಾನಿ, "ಅವರು ನಮ್ಮ ಮಕ್ಕಳು ಕೊಂದಿರುವುದು ಮಾತ್ರವಲ್ಲದೆ, ಮಹಿಳೆಯರನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ನಮ್ಮ ಕುಟುಂಬಗಳ ಹಿರಿಯರನ್ನು ಕೊಂದಿದ್ದಾರೆ. ಮಾನವೀಯತೆಗೆ ವಿರುದ್ಧವಾದ ಮಾನವ ಹತ್ಯೆ ಮಾಡಿದ್ದಾರೆ, ಇದಕ್ಕೆ ಅವರು ಬೆಲೆ ತೆರುತ್ತಾರೆ."
ಪ್ರತಿಯೊಬ್ಬರೂ "ಈ ಮೂಲಭೂತವಾದವನ್ನು ಇಡೀ ಜಗತ್ತು ನೋಡುವ, ಕೇಳುವ ಮತ್ತು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಹೋರಾಡುವ ಅಗತ್ಯವಿದೆ. ಎಲ್ಲರೂ ಇದನ್ನು ಮಾಡದಿದ್ದರೆ, ಅದು ದೊಡ್ಡ ತಪ್ಪಾಗುತ್ತದೆ" ಎಂದು ಶೋಶಾನಿ ಹೇಳಿದರು.
ಇಸ್ರೇಲ್ನಲ್ಲಿರುವ ಭಾರತೀಯರ ಸುರಕ್ಷತೆ ಬಗೆಗಿನ ಪ್ರಶ್ನೆಗೆ, "ಹೆಚ್ಚಿನವರು ಸುರಕ್ಷಿತವಾಗಿದ್ದು, ಟೆಲ್ ಅವಿವ್ನಲ್ಲಿರುವ ಸಕ್ರಿಯ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಇಸ್ರೇಲ್ ಯುದ್ಧದ ಪರಿಸ್ಥಿತಿಯಲ್ಲಿದ್ದರೂ, ರಕ್ಷಿಸುವ ಸಾಮರ್ಥ್ಯ ನಮ್ಮಲ್ಲಿದೆ. ನಮ್ಮ ಬಳಿ ಐರನ್ ಡೋಮ್ ಇದೆ. ಇಸ್ರೇಲ್ ತೊರೆಯಲು ಬಯಸುವ ಎಲ್ಲ ಭಾರತೀಯರು, ಇಸ್ರೇಲ್ ತೊರೆಯಬಹುದು" ಎಂದು ತಿಳಿಸಿದರು.
"ಭಾರತದಲ್ಲಿ ಸಾಕಷ್ಟು ಇಸ್ರೇಲಿಗರಿದ್ದಾರೆ. ಭಾರತದಲ್ಲಿರುವ ಇಸ್ರೇಲಿಗರು ತಮ್ಮ ದೇಶಕ್ಕೆ ಮರಳಲು, ಇಸ್ರೇಲ್ನಲ್ಲಿ ಸೈನ್ಯಕ್ಕೆ ಸಹಾಯ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಅವರನ್ನು ಹೇಗೆ ತಮ್ಮ ದೇಶಕ್ಕೆ ಕಳುಹಿಸುವುದು ಎನ್ನುವುದರ ಕುರಿತು ನಾವು ಮಾತುಕತೆ ನಡೆಸುತ್ತಿದ್ದೇವೆ. ಇದರಿಂದ ಅವರು ಇಸ್ರೇಲ್ ಸಶಸ್ತ್ರ ಪಡೆಗಳಿಗೆ ಸಹಾಯ ಮಾಡಬಹುದು" ಎಂದು ಹೇಳಿದರು.
ಇದನ್ನೂ ಓದಿ : 'ಇಸ್ರೇಲ್ ಕೇವಲ ಆರಂಭಿಕ ಟಾರ್ಗೆಟ್': ಹಮಾಸ್ ಕಮಾಂಡರ್ ಮಹಮೂದ್ ಅಲ್ ಜಹರ್ ಹೇಳಿಕೆ... ವಿಡಿಯೋ