ವಾರಾಣಸಿ: ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶೃಂಗಾರಗೌರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಐವರು ಹಿಂದು ಮಹಿಳೆಯರು ಸಲ್ಲಿಸಿದ ಅರ್ಜಿಯನ್ನು ಉತ್ತರಪ್ರದೇಶದ ವಾರಾಣಸಿ ಜಿಲ್ಲಾ ನ್ಯಾಯಾಲಯ ಪುರಸ್ಕರಿಸಿದೆ.
ಪೂಜೆ ಸಲ್ಲಿಸಲು ಕೋರಿದ ಅರ್ಜಿಯು ವಿಚಾರಣೆಗೆ ಅರ್ಹವಾಗಿದೆ. ಹೀಗಾಗಿ ಇದರ ವಿಚಾರಣೆಯನ್ನು ಸೆಪ್ಟೆಂಬರ್ 22 ರಂದು ನಡೆಸಲಾಗುವುದು ಎಂದು ಕೋರ್ಟ್ ತಿಳಿಸಿತು. ಇದೇ ವೇಳೆ ಹಿಂದೂಗಳ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಸಲ್ಲಿಸಲಾಗಿದ್ದ ಮುಸ್ಲಿಂ ಪರ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.
"ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ ಅವರು ಹಿಂದೂಗಳ ಅರ್ಜಿಯನ್ನು ವಿಚಾರಣೆ ನಡೆಸಲು ಒಪ್ಪಿದರು. ಮುಸ್ಲಿಂ ಪರ ಅರ್ಜಿಯನ್ನು ತಿರಸ್ಕರಿಸಿದರು. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 22 ರಂದು ನಡೆಯಲಿದೆ" ಎಂದು ಕೋರ್ಟ್ ವಿಚಾರಣೆಯ ಬಳಿಕ ಹಿಂದು ಪರ ವಕೀಲ ವಿಷ್ಣು ಶಂಕರ್ ಜೈನ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಹೈಕೋರ್ಟ್ನಲ್ಲಿ ಪ್ರಶ್ನಿಸಲು ನಿರ್ಧಾರ: "ಇನ್ನು ಮುಸ್ಲಿಂ ಪರ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದ ಕಾರಣ ಇದರ ವಿರುದ್ಧ ಅಲಹಾಬಾದ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗುವುದು. ಸುನ್ನಿ ಧರ್ಮಗುರು ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ ಅವರು ಕಾನೂನು ತಂಡದ ಜೊತೆಗೂಡಿ ತೀರ್ಪನ್ನು ಅಧ್ಯಯನ ಮಾಡಿ, ಬಳಿಕ ಹೈಕೋರ್ಟ್ ಮೆಟ್ಟಿಲೇರುವ ಬಗ್ಗೆ ನಿರ್ಧರಿಸಲಾಗುವುದು" ಎಂದು ಮುಸ್ಲಿಂ ಅರ್ಜಿದಾರರ ಪರ ವಕೀಲ ಸೋಹನ್ ಲಾಲ್ ಆರ್ಯ ಹೇಳಿದರು.
ಪ್ರಕರಣವೇನು?: ಜ್ಞಾನವಾಪಿಯ ಶೃಂಗಾರ್ ಗೌರಿ ಮಸೀದಿಯಲ್ಲಿ ನಡೆಸಲಾದ ಸರ್ವೇ ಕಾರ್ಯದ ವೇಳೆ ಶಿವಲಿಂಗ, ಕಲ್ಯಾಣಿ ಪತ್ತೆಯಾಗಿತ್ತು. ಇದು ಹಿಂದು ದೇವಸ್ಥಾನವಾಗಿತ್ತು ಎಂಬುದಕ್ಕೆ ಪುರಾವೆಗಳು ಲಭ್ಯವಾದ ತಕ್ಷಣ ಶೃಂಗಾರಗೌರಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹಿಂದೂ ಪಕ್ಷಗಾರರು ಅವಕಾಶ ಕೋರಿ ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇದು ಸೂಕ್ಷ್ಮ ಪ್ರಕರಣವಾದ ಕಾರಣ ಕೆಳ ಹಂತದ ನ್ಯಾಯಾಲಯ ಅರ್ಜಿಯನ್ನು ಮೇಲಿನ ಹಂತದ ಕೋರ್ಟ್ಗೆ ವರ್ಗಾಯಿಸಿತ್ತು. ಬಳಿಕ ಮುಸ್ಲಿಂ ಪಕ್ಷಗಾರರು ಈ ಕುರಿತಾಗಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
"ವಿಷಯದ ಸಂಕೀರ್ಣತೆ ಮತ್ತು ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ವಾರಣಾಸಿಯ ಸಿವಿಲ್ ನ್ಯಾಯಾಧೀಶರು ಉತ್ತರಪ್ರದೇಶ ನ್ಯಾಯಾಂಗದ ಹಿರಿಯ ಮತ್ತು ಅನುಭವಿ ಅಧಿಕಾರಿಯ ಮುಂದೆ ಈ ಅರ್ಜಿಯ ವಿಚಾರಣೆ ನಡೆಸಬೇಕು. ಅಲ್ಲಿಯವರೆಗೂ ಸ್ಥಳದಲ್ಲಿ ಯಥಾಸ್ಥಿತಿ ಕಾಪಾಡಬೇಕು" ಎಂದು ಸುಪ್ರೀಂಕೋರ್ಟ್ ಆದೇಶಿಸಿತ್ತು.