ಗ್ವಾಲಿಯರ್(ಮಧ್ಯಪ್ರದೇಶ): ಬೇರೊಂದು ಧರ್ಮಕ್ಕೆ ಮತಾಂತರಗೊಂಡು ವಿವಾಹವಾಗಿ ಧಾರ್ಮಿಕ ಸಂಸ್ಥೆಗಳಿಂದ ಪ್ರಮಾಣ ಪತ್ರ ಪಡೆಯುವ ಕುರಿತು ಗ್ವಾಲಿಯರ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪುರುಷ ಅಥವಾ ಮಹಿಳೆಯ ಧರ್ಮವನ್ನು ಬದಲಾಯಿಸುವ ಹಕ್ಕು ಯಾವುದೇ ಧಾರ್ಮಿಕ ಸಂಸ್ಥೆಗಳಿಗೆ ಇಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಧರ್ಮಾಂತರ ಬಯಸುವವರು ಜಿಲ್ಲಾಧಿಕಾರಿಗೆ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಹಕ್ಕು ಮತ್ತು ಆಕ್ಷೇಪಣೆಗಳನ್ನು ಆಲಿಸಿದ ನಂತರವೇ ಮತಾಂತರಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡಬೇಕು. ಆಗ ಮಾತ್ರ ಮತಾಂತರ ಸಿಂಧುವಾಗುತ್ತದೆ. ಯಾವುದೇ ಧಾರ್ಮಿಕ ಸಂಸ್ಥೆಗಳು ಯಾರನ್ನೂ ಬೇರೊಂದು ಧರ್ಮಕ್ಕೆ ಪರಿವರ್ತಿಸುವ ಹಕ್ಕಿಲ್ಲ ಎಂದು ಮಹತ್ವದ ಆದೇಶ ನೀಡಿದೆ.
ಪ್ರಕರಣವೇನು?: ಗ್ವಾಲಿಯರ್ ನಿವಾಸಿಯಾದ ಮುಸ್ಲಿಂ ಯುವತಿಯೊಬ್ಬಳು ಆರ್ಯ ಸಮಾಜದಲ್ಲಿ ತನ್ನ ಹಿಂದೂ ಧರ್ಮದ ಪ್ರಿಯತಮನ ಜೊತೆಗೂಡಿ ಆತನ ಧರ್ಮಕ್ಕೆ ಮತಾಂತರಗೊಂಡು ವಿವಾಹವಾಗಿದ್ದರು. ಅಲ್ಲಿಯೇ ವಿವಾಹ ಪ್ರಮಾಣಪತ್ರ ಪಡೆದಿದ್ದರು. ಇದರ ವಿರುದ್ಧ ಯುವತಿಯ ಕುಟುಂಬಸ್ಥರು ದೂರು ದಾಖಲಿಸಿದ್ದರು.
ಪ್ರೇಮಿಗಳನ್ನು ಬಂಧಿಸಿದ್ದ ಪೊಲೀಸರು ಯುವತಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು. ಈ ಕುರಿತು ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಗ್ವಾಲಿಯರ್ ಹೈಕೋರ್ಟ್, ಯಾರನ್ನೇ ಆದರೂ ತಮ್ಮ ಧರ್ಮಕ್ಕೆ ಮತಾಂತರಗೊಳಿಸುವ ಹಕ್ಕು ಯಾವುದೇ ಧಾರ್ಮಿಕ ಸಂಸ್ಥೆಗಳಿಗಿಲ್ಲ. ಇದು ಕಾನೂನಿನಲ್ಲಿ ಮಾನ್ಯವಾಗಿಲ್ಲ. ಆರ್ಯ ಸಮಾಜದಲ್ಲಿ ಮತಾಂತರಗೊಂಡು ಯುವಕ, ಯುವತಿ ವಿವಾಹವಾಗಿದ್ದು ಅಸಿಂಧು ಎಂದು ಕೋರ್ಟ್ ಹೇಳಿದೆ.
ಯುವತಿ ವಯಸ್ಕಳಾದ ಕಾರಣ ಆಕೆಗೆ ಆಯ್ಕೆಯ ಹಕ್ಕಿದೆ. ವಿವಾಹ ಅಸಿಂಧುವಾದರೂ, ಆಕೆ ಕುಟುಂಬಸ್ಥರೊಂದಿಗೆ ಹೋಗಲು ಇಚ್ಚಿಸುವುದಿಲ್ಲವಾದರೆ ಪ್ರೇಮಿಯೊಂದಿಗೆ ಹೋಗಬಹುದು. ಆಕೆಯನ್ನು ವಾರದೊಳಗೆ ಸಾಂತ್ವನ ಕೇಂದ್ರದಿಂದ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ. ಈ ಆದೇಶವು ಧರ್ಮವನ್ನು ಪರಿವರ್ತಿಸುವ ಮೂಲಕ ಮಾಡುವ ಮದುವೆಗಳ ಕುರಿತ ಮಹತ್ವದ ತೀರ್ಪು ಎಂದು ಬಣ್ಣಿಸಲಾಗಿದೆ.
ಓದಿ: ಬಟ್ಟೆ ಧರಿಸುವುದು ಮೂಲಭೂತ ಹಕ್ಕಾದರೆ ಹಾಕದಿರುವುದೂ ಹಕ್ಕೇ: ಸುಪ್ರೀಂನಲ್ಲಿ ಕಾವೇರಿದ ವಿಚಾರಣೆ