ಗ್ವಾಲಿಯರ್(ಮಧ್ಯಪ್ರದೇಶ): ಭೀಕರ ರಸ್ತೆ ಅಪಘಾತವೊಂದರಲ್ಲಿ ಒಂದೇ ಕುಟುಂಬದ ಐವರು ದುರ್ಮರಣಕ್ಕೀಡಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ. ಬಸ್ಗಾಗಿ ಕಾಯುತ್ತಾ ರಸ್ತೆ ಬದಿಯಲ್ಲಿ ನಿಂತಿದ್ದವರ ಮೇಲೆ ನಿಯಂತ್ರಣ ಕಳೆದುಕೊಂಡ ಬೊಲೆರೋ ಏಕಾಏಕಿ ಹರಿದು ಹೋಗಿದೆ. ಹೀಗಾಗಿ, ಕುಟುಂಬದ ಎಲ್ಲರೂ ಸಾವನ್ನಪ್ಪಿದ್ದಾರೆ. ಘಟನೆಯಿಂದಾಗಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣಗೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವೇಗದಲ್ಲಿ ಓವರ್ ಟೇಕ್ ಮಾಡಲು ಮುಂದಾಗಿರುವ ಬೊಲೆರೋ ಹರಿದು ಹೋಗಿರುವ ಕಾರಣ ಈ ಅವಘಡ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದುವರೆಗೆ ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬಿಜೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಐವರ ಮೃತದೇಹಗಳನ್ನ ಆಟೋವೊಂದರಲ್ಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಇದನ್ನೂ ಓದಿ: ಬಾಲಿವುಡ್ ವರ್ಸಸ್ ಸೌತ್ ಚರ್ಚೆ: 'ನಾನೊಬ್ಬ ಭಾರತೀಯ, ನೀವು ಏನು?': ಕಮಲ್ ಹಾಸನ್ ಪ್ರಶ್ನೆ
ಪಕ್ಕದ ಊರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗಿಯಾಗಿ, ವಾಪಸ್ ಮೊರೆನಾ ಗ್ರಾಮಕ್ಕೆ ಬರಲು ಎಲ್ಲರೂ ಬಸ್ಗಾಗಿ ಕಾಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮಹಿಳೆಯರು, ವ್ಯಕ್ತಿ ಹಾಗೂ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದಾರೆ. ಮೃತರನ್ನ ಪಪ್ಪು, ಪತ್ನಿ ರಾಜಾ ಬೇಟಿ, ಪುತ್ರಿಯರಾದ ರೇಷ್ಮಾ, ಪೂನಂ ಹಾಗೂ ಮತ್ತೋರ್ವ ಸಂಬಂಧಿ ಮಹಿಳೆ ಎಂದು ಗುರುತಿಸಲಾಗಿದೆ.
ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿ ಪ್ರಕಾರ, ಓವರ್ಟೇಕ್ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದ್ದು, ಈ ವೇಳೆ ಬಸ್ಗಾಗಿ ಕಾಯುತ್ತಿದ್ದ ಮೇಲೆ ಹರಿದು ಹೋಗಿದೆ. ಘಟನೆ ಬೆನ್ನಲ್ಲೇ ವಾಹನ ಸಮೇತ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ. ಅಪಘಾತ ನಡೆದ ಸ್ಥಳಕ್ಕೆ ಸ್ಥಳೀಯ ಆಡಳಿತ ಯಾವುದೇ ಆ್ಯಂಬುಲೆನ್ಸ್ ಕಳುಹಿಸಿಕೊಟ್ಟಿಲ್ಲ. ಹೀಗಾಗಿ, ಮೃತದೇಹಗಳನ್ನ ಆಟೋವೊಂದರಲ್ಲಿ ತುಂಬಿಕೊಂಡು ಆಸ್ಪತ್ರೆಗೆ ಹೋಗಲಾಗಿದೆ.