ಗುಜರಾತ್/ಒಡಿಶಾ: ಕರ್ನಾಟಕ, ಗುಜರಾತ್, ಒಡಿಶಾ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಜೋರು ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವು ಪ್ರದೇಶಗಳು ಜಲಾವೃತವಾಗಿದ್ದು, ಸಂಚಾರ ಸ್ಥಗಿತಗೊಂಡಿದೆ.
ಗುಜರಾತ್‌ನ ದಕ್ಷಿಣ ಮತ್ತು ಕೇಂದ್ರ ಭಾಗಗಳಲ್ಲಿ ಜಡಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ನವಸಾರಿಯ ಹಲವು ಭಾಗಗಳಿಗೆ ಜಲ ದಿಗ್ಬಂಧನ ಹಾಕಿದೆ. ಅನೇಕ ಗ್ರಾಮಗಳು ಹೊರಜಗತ್ತಿನ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಂಡಿವೆ. ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. ಜೂನ್ 1 ರಿಂದ ಈವರೆಗೆ ಮಳೆಯಿಂದಾಗಿ 63 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಸಚಿವ ರಾಜೇಂದ್ರ ತ್ರಿವೇದಿ ಮಾಹಿತಿ ನೀಡಿದರು.
ಒಡಿಶಾ- ಹಗ್ಗದೊಂದಿಗೆ ವಿದ್ಯಾರ್ಥಿಗಳ ಸರ್ಕಸ್: ರಾಜ್ಯದ ಗಂಜಾಂ ಜಿಲ್ಲೆಯಲ್ಲೂ ಜಡಿ ಮಳೆ ಸುರಿಯುತ್ತಿದ್ದು ಬೆಹ್ರಾಂಪುರದ ಬುಡಕಟ್ಟು ವಿದ್ಯಾರ್ಥಿಗಳು ಶಾಲೆಗೆ ತೆರಳಲು ಹಗ್ಗದ ಸಹಾಯದಿಂದ ನದಿ ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೇತುವೆ ಇಲ್ಲದ ಕಾರಣ ವಿದ್ಯಾರ್ಥಿಗಳು ಒಬ್ಬರ ಬಳಿಕ ಒಬ್ಬರಂತೆ ನದಿ ದಾಟುತ್ತಿದ್ದರು.
ಇದನ್ನೂ ಓದಿ: ಶಿವಮೊಗ್ಗ: ಮುಂದುವರೆದ ಮಳೆಯಾರ್ಭಟ.. ನದಿ ನೀರಿನ ಪ್ರಮಾಣದಲ್ಲಿ ಹೆಚ್ಚಳ