ಸೂರತ್(ಗುಜರಾತ್): 2 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಲ್ಲದೇ ಕೊಲೆ ಮಾಡಿದ್ದ ಕ್ರೂರಿಗೆ ಇಲ್ಲಿನ ವಿಶೇಷ ಪೋಕ್ಸೋ ನ್ಯಾಯಾಲಯ ಮರಣದಂಡನೆ ವಿಧಿಸಿ ಆದೇಶಿಸಿದೆ. ಘಟನೆ ನಡೆದ 28 ದಿನದೊಳಗೆ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆ ತೀರ್ಪು ನೀಡಿದ ಕಾರಣ ಇದೊಂದು 'ಅಪರೂಪದಲ್ಲಿಯೇ ಅಪರೂಪವಾದ' ತೀರ್ಪು ಎನ್ನಲಾಗಿದೆ.
ಇಲ್ಲಿನ ಕಾರ್ಮಿಕ ದಂಪತಿಯ 2 ವರ್ಷದ ಹಸುಳೆಯನ್ನು ಆರೋಪಿ ಗುಡ್ಡು ಯಾದವ್ ನವೆಂಬರ್ 4 ರಂದು ರಾತ್ರಿ ವೇಳೆ ಅಪಹರಿಸಿ, ಲೈಂಗಿಕ ಕಿರುಕುಳ ನೀಡಿ ಕೊಲೆ ಮಾಡಿದ್ದ. ನವೆಂಬರ್ 7 ರಂದು ಮಗುವಿನ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮತ್ತು ವಿವಿಧ ಸಾಕ್ಷಿಗಳ ಆಧಾರದ ಮೇಲೆ ನವೆಂಬರ್ 8 ರಂದು ಆರೋಪಿಯನ್ನು ಬಂಧಿಸಿದ್ದರು.
ತ್ವರಿತ ವಿಚಾರಣೆಗಾಗಿ ಆರೋಪಿಯನ್ನು ಬಂಧಿಸಿದ 7 ದಿನಗಳ ನಂತರ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ವಿಶೇಷ ಪೋಕ್ಸೋ ಕೋರ್ಟ್ 42 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿತು. ಆರೋಪ ಸಾಬೀತಾದ ಹಿನ್ನೆಲೆ ನ್ಯಾಯಾಧೀಶೆ ಪಿ.ಎಸ್.ಕಲಾ ಅವರಿದ್ದ ಪೀಠ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಿದೆ. ಅಲ್ಲದೇ, ಸಂತ್ರಸ್ತ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ.
ಇದನ್ನೂ ಓದಿ: ನಾನು ಮೋದಿ ವಿರೋಧಿಯಲ್ಲ, ಅವರ ನೀತಿಗೆ ವಿರೋಧಿ.. ಡಾ. ಸುಬ್ರಮಣಿಯನ್ ಸ್ವಾಮಿ
ಬಡವರಾದ ನಮಗೆ ನ್ಯಾಯ ಸಿಗುವುದಿಲ್ಲ ಎಂದು ಭಾವಿಸಿದ್ದೆವು. ಇಷ್ಟು ಬೇಗ ಶಿಕ್ಷೆ ಪ್ರಕಟಿಸಿದ್ದಕ್ಕೆ ನ್ಯಾಯಾಲಯದ ಕಾರ್ಯವನ್ನು ಸಂತ್ರಸ್ತೆಯ ಕುಟುಂಬಸ್ಥರು ಶ್ಲಾಘಿಸಿದ್ದಾರೆ. ಇನ್ನು ತ್ವರಿತವಾಗಿ ತೀರ್ಪು ಬಂದ ಹಿನ್ನೆಲೆ ಇದೊಂದು 'ಅಪರೂಪದಲ್ಲಿಯೇ ಅಪರೂಪದ ತೀರ್ಪು' ಎಂಬ ಖ್ಯಾತಿ ಪಡೆದಿದೆ. ಇದಕ್ಕೂ ಮುನ್ನ ಇಲ್ಲಿನ ಗಾಂಧಿನಗರ ಪೋಕ್ಸೋ ನ್ಯಾಯಾಲಯ ಅತ್ಯಾಚಾರ ನಡೆದ 5 ದಿನಗಳೊಳಗೆ ಅಪರಾಧಿಗೆ ಜೀವಾವಧಿ ಶಿಕ್ಷೆ ತೀರ್ಪು ನೀಡಿತ್ತು.