ಗಾಂಧಿನಗರ: ಗುಜರಾತ್ ಪಂಚಾಯತ್ ಸೇವಾ ಆಯ್ಕೆ ಮಂಡಳಿಯು (ಜಿಪಿಎಸ್‌ಎಸ್‌ಬಿ) ಜೂನಿಯರ್ ಕ್ಲರ್ಕ್ ಹುದ್ದೆಗಳಿಗೆ ಇಂದು ನಡೆಸಬೇಕಿದ್ದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯು ಪ್ರಶ್ನೆಪತ್ರಿಕೆ ಸೋರಿಕೆಯಾಗಿ ರದ್ದುಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 15 ಮಂದಿ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವಿಚಾರವನ್ನು ರಾಜ್ಯ ಪಂಚಾಯತ್ ಪರೀಕ್ಷಾ ಮಂಡಳಿ ತಿಳಿಸಿದೆ.
ರಾಜ್ಯಾದ್ಯಂತ 2,995 ಕೇಂದ್ರಗಳಲ್ಲಿ 1,150 ಹುದ್ದೆಗಳಿಗೆ ನಡೆಯಬೇಕಿದ್ದ ಜೂನಿಯರ್ ಕ್ಲರ್ಕ್ ಪರೀಕ್ಷೆಗೆ 9,53,000 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 70,000 ಪರೀಕ್ಷಾ ಸಿಬ್ಬಂದಿ ಮತ್ತು 7,500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದ್ರೆ, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ನಿಗದಿಯಾದ ಸಮಯಕ್ಕಿಂತ ಒಂದು ಗಂಟೆ ಮೊದಲು ಪರೀಕ್ಷೆಯನ್ನು ಮೊಟಕುಗೊಳಿಸಲಾಗಿದೆ.
15 ಮಂದಿ ವಶಕ್ಕೆ: ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಆರೋಪದಡಿ 15 ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರೆಸಿದ್ದಾರೆ. ಈ ಪೈಕಿ ಕೆಲವರು ಬರೋಡಾದವರಾಗಿದ್ದು, ಪ್ರಮುಖ ಆರೋಪಿ ಒಡಿಶಾ ಸ್ಪರ್ಧಾತ್ಮಕ ಪರೀಕ್ಷೆಯ ಪಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪೊಲೀಸ್ ಮೂಲಗಳ ಮಾಹಿತಿಯಂತೆ, ದಂಧೆಯಲ್ಲಿ ತೊಡಗಿರುವ ಇನ್ನಷ್ಟು ಶಂಕಿತರನ್ನು ಬಂಧಿಸಲು ಐದು ಪೊಲೀಸ್ ತಂಡಗಳನ್ನು ತೆಲಂಗಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ದೆಹಲಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಅಸಿಸ್ಟೆಂಟ್ ಪ್ರೊಫೆಸರ್ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದೇಗೆ? ಚಾರ್ಜ್ ಶೀಟ್ನಲ್ಲಿ ಪಿನ್ ಟು ಪಿನ್ ಮಾಹಿತಿ
ಇಂದು ಮುಂಜಾನೆ GPSSB ಕಾರ್ಯದರ್ಶಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ಮೂಲಕ ಪೇಪರ್ ಲೀಕ್ ಆಗಿರುವ ಮಾಹಿತಿ ಬಹಿರಂಗಪಡಿಸಿದ್ದಾರೆ. ಸದ್ಯಕ್ಕೆ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಸಮಯ ನಿಗದಿಪಡಿಸುವುದಾಗಿ ಅವರು ಘೋಷಿಸಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ತೆರಳಿದ ಅಭ್ಯರ್ಥಿಗಳು ನಿರಾಶೆಯಿಂದ ಮನೆ ಕಡೆಗೆ ಮುಖ ಮಾಡಿದ್ದಾರೆ.
ಪರೀಕ್ಷಾರ್ಥಿಗಳಿಂದ ಪ್ರತಿಭಟನೆ: ಲುಣವಾಡ ಎಸ್‌ಟಿ ಡಿಪೋ ಬಳಿ ಅಭ್ಯರ್ಥಿಗಳ ಗುಂಪೊಂದು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿತು. ಭಾವನಗರದಿಂದ ಅಹಮದಾಬಾದ್‌ಗೆ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿ ಅಜಯ್, "ರಾತ್ರಿ ಪ್ರಯಾಣಿಸಿ ನಸುಕಿನ ಜಾವ 2 ಗಂಟೆ ಸುಮಾರಿಗೆ ಇಲ್ಲಿಗೆ ತಲುಪಿದ್ದೇವೆ. ಈಗ ಪರೀಕ್ಷೆ ರದ್ದಾಗಿರುವುದು ತಿಳಿಯಿತು. ಕಳೆದ ಎರಡು ವರ್ಷಗಳಿಂದ ಈ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದೇನೆ. ಸರ್ಕಾರದ ವೈಫಲ್ಯದಿಂದ ನನ್ನಂತಹ ಅಭ್ಯರ್ಥಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಎಫ್‌ಡಿಎ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣದ ಕಿಂಗ್ ಪಿನ್ ಶಿವಲಿಂಗ್ ಪಾಟೀಲ್ ಕಚೇರಿ, ಮನೆ ಮೇಲೆ ಸಿಸಿಬಿ ದಾಳಿ
'ಕೈ' ನಾಯಕರ ಖಂಡನೆ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಮಿತ್ ಚಾವ್ಡಾ ಪೇಪರ್ ಲೀಕ್ ಆಗಿರುವುದನ್ನು ಖಂಡಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. "ಉನ್ನತ ಹುದ್ದೆಯಲ್ಲಿರುವವರು ಸೂಕ್ತ ರೀತಿಯಲ್ಲಿ ಪರೀಕ್ಷೆ ನಡೆಸಲು ವಿಫಲವಾದರೆ ನೈತಿಕ ಹೊಣೆ ಹೊರಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.