ಖೇಡಾ (ಗುಜರಾತ್): ಗುಜರಾತ್ನ ಖೇಡಾ ಜಿಲ್ಲೆಯಲ್ಲಿ ಕಳೆದ ವರ್ಷ ನವರಾತ್ರಿಯ ಗರ್ಬಾ ಕಾರ್ಯಕ್ರಮದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಿದ ಆರೋಪಿಗಳಿಗೆ ಪೊಲೀಸರು ಸಾರ್ವಜನಿಕವಾಗಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ವಿಧಿಸಿ ಗುಜರಾತ್ ಹೈಕೋರ್ಟ್ ಗುರುವಾರ ತೀರ್ಪು ನೀಡಿತು.
ನಾಲ್ವರು ಪೊಲೀಸರನ್ನು ತಪ್ಪಿತಸ್ಥರೆಂದು ಪರಿಗಣಿಸಿದ ಕೋರ್ಟ್ 14 ದಿನಗಳ ಸರಳ ಜೈಲು ಶಿಕ್ಷೆಯ ಜತೆಗೆ 2,000 ರೂಪಾಯಿ ದಂಡ ವಿಧಿಸಿದೆ. ಪೊಲೀಸರು ಕಾನೂನು ಕೈಗೆತ್ತಿಕೊಂಡ ಈ ರೀತಿಯ ವರ್ತನೆ ತೋರಿದ್ದು ಸಂತ್ರಸ್ತರಿಗೆ ಮಾನಸಿಕ ಹಿಂಸೆ ಉಂಟುಮಾಡಿದೆ ಎಂದು ಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಕಳೆದ ಅಕ್ಟೋಬರ್‌ನಲ್ಲಿ ಖೇಡಾ ಜಿಲ್ಲೆಯ ಮತುರ್ ತಾಲೂಕಿನ ಉಂಧೇಲಾ ಗ್ರಾಮದಲ್ಲಿ ನವರಾತ್ರಿ ಗರ್ಬಾ ನೃತ್ಯ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಅನ್ಯ ಸಮುದಾಯದ ಗುಂಪೊಂದು ಗರ್ಬಾ ಮೇಲೆ ಕಲ್ಲು ತೂರಾಟ ನಡೆಸಿತ್ತು. ಇದರಲ್ಲಿ ಕೆಲವು ಗ್ರಾಮಸ್ಥರು ಸೇರಿ ಪೊಲೀಸರೂ ಗಾಯಗೊಂಡಿದ್ದರು.
ಘಟನೆಗೆ ಸಂಬಂಧಿಸಿದಂತೆ ಒಟ್ಟು 13 ಜನರನ್ನು ಬಂಧಿಸಲಾಗಿತ್ತು. ಈ ಪೈಕಿ ಮೂವರನ್ನು ಪೊಲೀಸರು ಸಾರ್ವಜನಿಕವಾಗಿ ಕಂಬಕ್ಕೆ ಕಟ್ಟಿ ಥಳಿಸಿದ್ದರು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಕೆಲವು ಆರೋಪಿಗಳು ಪೊಲೀಸರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಪೊಲೀಸರು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಉಲ್ಲೇಖಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಸ್.ಸುಪಾಹಿಯಾ ಮತ್ತು ಗೀತಾ ಗೋಪಿ ಅವರಿದ್ದ ಪೀಠವು ಸರಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿತು.
ಇದಕ್ಕೂ ಮೊದಲು, ಈ ವರ್ಷದ ಜುಲೈನಲ್ಲಿ, ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸೇರಿದಂತೆ ಪೆನ್ ಡ್ರೈವ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಪುರಾವೆಗಳನ್ನು ವಿಶ್ಲೇಷಿಸಲು ನಾಡಿಯಾಡ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಇದನ್ನೂ ಓದಿ: 'ಶಾಸಕಾಂಗದಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡಲ್ಲ': ಹಿಂದು ಧಾರ್ಮಿಕ ಕೇಂದ್ರಗಳ ನಿಯಂತ್ರಣ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್