ಅಹಮದಾಬಾದ್ (ಗುಜರಾತ್): ಡಿಸೆಂಬರ್ 5 ರಂದು ಮಧ್ಯ ಗುಜರಾತ್ ಮತ್ತು ಉತ್ತರ ಗುಜರಾತ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆಗೆ 833 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ ಶೇಕಡಾ 61 ರಷ್ಟು ಅಭ್ಯರ್ಥಿಗಳು ಕಡಿಮೆ ಶೈಕ್ಷಣಿಕ ಅರ್ಹತೆ ಹೊಂದಿದ್ದು, ದ್ವಿತೀಯ ಪಿಯುಸಿ ಅಥವಾ 12ನೇ ತರಗತಿ ಮಾತ್ರ ಉತ್ತೀರ್ಣರಾಗಿದ್ದಾರೆ.
ಎರಡನೇ ಹಂತದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ಗುಜರಾತ್ ಚುನಾವಣಾ ವಾಚ್ ಮತ್ತು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನಡೆಸಿದ ಸಂಶೋಧನೆಯಲ್ಲಿ ಈ ಅಂಕಿ-ಅಂಶಗಳನ್ನು ಬಹಿರಂಗಪಡಿಸಲಾಗಿದೆ. ಒಟ್ಟು 833 ಅಭ್ಯರ್ಥಿಗಳಲ್ಲಿ 505 ಅಭ್ಯರ್ಥಿಗಳು ಐದರಿಂದ 12ನೇ ತರಗತಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿ 61 ಅಭ್ಯರ್ಥಿಗಳು 5ನೇ ತರಗತಿ, 116 ಮಂದಿ 8ನೇ ತರಗತಿ, 162 ಮಂದಿ 10ನೇ ತರಗತಿ ಹಾಗೂ 166 ಮಂದಿ 12ನೇ ತರಗತಿ ತೇರ್ಗಡೆಯಾಗಿದ್ದಾರೆ.
ಇನ್ನು 264 (ಶೇ 32) ಅಭ್ಯರ್ಥಿಗಳು ಪದವೀಧರರು ಮತ್ತು 27 ಅಭ್ಯರ್ಥಿಗಳು ಡಿಪ್ಲೊಮಾ ಓದಿದ್ದಾರೆ. ಇನ್ನುಳಿದವರ ಪೈಕಿ 32 ಅಭ್ಯರ್ಥಿಗಳು ಓದಲು ಮತ್ತು ಬರೆಯಲು ಮಾತ್ರ ಬಲ್ಲರು. 70 ಅಭ್ಯರ್ಥಿಗಳು ಸ್ನಾತಕೋತ್ತರ ಪದವೀಧರರಾಗಿದ್ದು, 10 ಅಭ್ಯರ್ಥಿಗಳು ಡಾಕ್ಟರೇಟ್ ಪಡೆದಿದ್ದಾರೆ. ಆದರೆ 5 ಅಭ್ಯರ್ಥಿಗಳು ಅನಕ್ಷರಸ್ಥರು ಎಂದು ತಾವು ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
ಅಭ್ಯರ್ಥಿಗಳ ವಯಸ್ಸಿನ ಬಗ್ಗೆ ನೋಡಿದರೆ, ಒಟ್ಟು 284 (ಶೇ 34) ಅಭ್ಯರ್ಥಿಗಳು 25 ರಿಂದ 40 ವರ್ಷದೊಳಗಿನವರು. ಸುಮಾರು 430 (ಶೇ 52) ಅಭ್ಯರ್ಥಿಗಳು 41 ರಿಂದ 60 ವರ್ಷ ವಯಸ್ಸಿನವರು. 118 (ಶೇಕಡಾ 14) ಕ್ಕಿಂತ ಹೆಚ್ಚು ಅಭ್ಯರ್ಥಿಗಳು 61 ರಿಂದ 80 ವರ್ಷ ವಯಸ್ಸಿನವರು.
ರಾಜ್ಯದಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ 833 ಅಭ್ಯರ್ಥಿಗಳ ಪೈಕಿ 69 (ಶೇ 8) ಅಭ್ಯರ್ಥಿಗಳು ಮಾತ್ರ ಮಹಿಳೆಯರು. ಸುಮಾರು 21 ಮಹಿಳೆಯರು ಸ್ವತಂತ್ರವಾಗಿ ಸ್ಪರ್ಧಿಸಲಿದ್ದು, ಬಿಜೆಪಿಯಿಂದ 8, ಐಎನ್‌ಸಿಯಿಂದ 7 ಮತ್ತು ಆಮ್ ಆದ್ಮಿ ಪಕ್ಷದಿಂದ ಓರ್ವ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಇದನ್ನೂ ಓದಿ: ಗುಜರಾತ್‌ನಲ್ಲಿ ಅರವಿಂದ್ ಕೇಜ್ರಿವಾಲ್ ರೋಡ್ಶೋ ಮೇಲೆ ಕಲ್ಲು ತೂರಾಟ: ವಿಡಿಯೋ