ಸೂರತ್ : ಗುಜರಾತ್‌ನ ಸೂರತ್‌ನಲ್ಲಿರುವ ದೇಸಾಯಿ ಕುಟುಂಬವೊಂದು ಎರಡನೇ ಮಹಾಯುದ್ಧದ ಕಾಲದ 45 ವಿಂಟೇಜ್ ಬೈಕ್‌ಗಳ ಸಂಗ್ರಹವನ್ನು ಹೊಂದಿದೆ. ರಾಯಲ್ ಎನ್‌ಫೀಲ್ಡ್‌ನಿಂದ ಹಿಡಿದು ಬುಲೆಟ್, ಲ್ಯಾಂಬ್ರೆಟ್ಟಾ, ಯೆಜ್ಡಿ ಮತ್ತು ಜಾವಾ ಎಂದು ಜನಪ್ರಿಯವಾಗಿರುವ ಇನ್ನೂ ಅನೇಕ ಬೈಕ್‌ಗಳ ಸಂಗ್ರಹವು ಕೃಪಲಾನಿ ದೇಸಾಯಿ ಅವರ ಪುತ್ರ ಸಿದ್ಧಾರ್ಥ್ ದೇಸಾಯಿ ಅವರ ಆಸ್ತಿಯಾಗಿದೆ.
ಹೌದು, ಮೂಲತಃ ಕೃಷಿ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿದ್ದ ದೇಸಾಯಿ ಕುಟುಂಬಕ್ಕೆ ಹಳೆಯ ಬೈಕ್‌ಗಳ ಮೇಲಿನ ಉತ್ಸಾಹವು 1990 ರಲ್ಲಿ ಪ್ರಾರಂಭವಾಯಿತು. ವಿಂಟೇಜ್ ಮೋಟಾರ್ ಸೈಕಲ್‌ಗಳ ಮೇಲಿನ ಒಲವಿನ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿನ ಸಿದ್ಧಾರ್ಥ್, " 1990 ರಲ್ಲಿ ನನ್ನ ತಂದೆ ವಿವಿಧ ನಗರಗಳಿಂದ ಬೈಕ್‌ಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ತಂದೆಯವರಿಗೆ ಬೈಕ್‌ಗಳೆಂದರೆ ತುಂಬಾ ಪ್ರೀತಿ. ಹೀಗಾಗಿ, ಅವರು ಹಳೆಯ ಬೈಕ್‌ಗಳನ್ನು ಖರೀದಿಸಲು ಮುಂದಾದರು. ತಂದೆಯವರ ಹವ್ಯಾಸವು ಕ್ರಮೇಣ ಉತ್ಸಾಹಕ್ಕೆ ತಿರುಗಿತು" ಎಂದರು.
ದೇಸಾಯಿ ಕುಟುಂಬದವರು ತಮ್ಮ ಮನೆಯ ಒಂದು ಭಾಗವನ್ನೇ ಬೈಕ್ ಮ್ಯೂಸಿಯಂ ಆಗಿ ಪರಿವರ್ತಿಸಿದ್ದಾರೆ. ಜೊತೆಗೆ, ವಿಂಟೇಜ್ ಬೈಕ್‌ಗಳನ್ನು ನೋಡಿಕೊಳ್ಳಲು ಮೆಕ್ಯಾನಿಕ್ ಅನ್ನು ಸಹ ನಿಯೋಜಿಸಲಾಗಿದೆ. ಈ ಬೈಕ್‌ಗಳನ್ನು ತಿಂಗಳಿಗೆ ನಾಲ್ಕೈದು ಬಾರಿ ಸರ್ವಿಸ್ ಮಾಡಲಾಗುತ್ತದೆ. "ನಮ್ಮಲ್ಲಿ ಹಸ್ಕ್‌ವರ್ನಾ, ಬಿಎಸ್‌ಎ ಎಂ20, ನಾರ್ಟನ್ 16, ಟ್ರಯಂಫ್ ಟೈಗರ್ ಮತ್ತು ಇನ್ನೂ ಹಲವು ಹಳೆಯ ಬೈಕ್‌ಗಳಿವೆ. ಬಿಎಸ್‌ಎ ಎಂ20 ಅನ್ನು ಎರಡನೇ ಮಹಾಯುದ್ಧದ ಸಮಯದಲ್ಲಿ ಬಳಸಲಾಗಿದೆ. ನಮ್ಮ ವಿಂಟೇಜ್ ಸಂಗ್ರಹವು 123 ವರ್ಷಗಳ ಹಿಂದಿನದು" ಎಂದು ಸಿದ್ಧಾರ್ಥ್ ಹೇಳಿದರು.
ಇದನ್ನೂ ಓದಿ : 300 ಕಿಮೀ ವೇಗದಲ್ಲಿ ಬೈಕ್ ಚಾಲನೆಯೊಂದಿಗೆ ವಿಡಿಯೋ ಮಾಡಲು ಯತ್ನ: ಯೂಟ್ಯೂಬರ್ - ಬೈಕರ್ ದಾರುಣ ಸಾವು
ಬೈಕ್ ಮ್ಯೂಸಿಯಂನಲ್ಲಿ ಪೆಡಲ್ ಚಾಲಿತ ರಾಯಲ್ ಎನ್‌ಫೀಲ್ಡ್ 1910 ಅನ್ನು ಸಹ ನಾವು ಕಾಣಬಹುದು. ಇದು ಬೈಕ್ ಪ್ರಿಯರ ಆಕರ್ಷಣೆಯ ಕೇಂದ್ರವಾಗಿದೆ. ಹಾಗೆಯೇ, BSA M20 ಮೋಟಾರ್‌ಸೈಕಲ್ ಅನ್ನು ಎರಡನೇ ಮಹಾಯುದ್ಧದಲ್ಲಿ ಬಳಸುವುದಕ್ಕಾಗಿ ತಯಾರಿಸಲಾಯಿತು. ನಂತರ ಈ ಬೈಕ್‌ಗಳನ್ನು ಬ್ರಿಟಿಷರು ಭಾರತಕ್ಕೆ ತಂದರು. ಭಾರತದಲ್ಲಿನ ಬ್ರಿಟಿಷ್ ಪೊಲೀಸರು ತಮ್ಮ ಕೆಲಸದ ಸಂದರ್ಭದಲ್ಲಿ ಈ ಬೈಕ್‌ಗಳನ್ನು ಬಳಸುತ್ತಿದ್ದರು. ವಿದೇಶಗಳಿಂದ ವಿಂಟೇಜ್ ದ್ವಿಚಕ್ರ ವಾಹನಗಳನ್ನು ಆಮದು ಮಾಡಿಕೊಳ್ಳಲಾಗಿದೆಯಾದರೂ ನಮ್ಮ ದೇಶದ ನೋಂದಣಿ ಸಂಖ್ಯೆಯನ್ನು ಹೊಂದಿವೆ.
ಇದನ್ನೂ ಓದಿ : ಬೈಕ್ ಸ್ಟಂಟ್ ಮಾಡಲು ಹೋಗಿ ಡಿವೈಡರ್ಗೆ ಗುದ್ದಿದ ಯುವಕರು : ಭಯಾನಕ ವಿಡಿಯೋ ನೋಡಿ
"ಆ ದಿನಗಳಲ್ಲಿ ಈ ವಿಂಟೇಜ್ ಬೈಕ್‌ಗಳ ಸಂಗ್ರಹ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಹೊಸ ಬೈಕ್ ಅನ್ನು ಶೋರೂಮ್‌ನಿಂದ ಸುಲಭವಾಗಿ ಖರೀದಿಸಬಹುದು. ಆದರೆ, ಹಳೆಯ ದ್ವಿಚಕ್ರ ವಾಹನಗಳ ಸಂಗ್ರಹ ಮಾಡುವುದು ತುಂಬಾ ಕಷ್ಟ. ನಾವು ಈ ಬೈಕ್‌ಗಳನ್ನು ರಾಜಸ್ಥಾನ, ಹೈದರಾಬಾದ್, ಪುಣೆ, ನಾಸಿಕ್‌ನಿಂದ ಖರೀದಿಸಿದ್ದೇವೆ. ಬೈಕ್‌ಗಳನ್ನು ನಾವು ಕೊಂಡುಕೊಂಡಾಗ ಅವುಗಳು ಓಡಾಡುವ ಸ್ಥಿತಿಯಲ್ಲಿ ಇರಲಿಲ್ಲ. ಬಳಿಕ ಅವುಗಳನ್ನು ರಿಪೇರಿ ಮಾಡಿ ಚಾಲನೆಯಲ್ಲಿರುವ ಹಂತಕ್ಕೆ ತಂದಿದ್ದೇವೆ" ಎನ್ನುತ್ತಾರೆ ಸಿದ್ಧಾರ್ಥ್.