ಸೂರತ್ ( ಗುಜರಾತ್): ರೆಮ್ಡಿಸಿವಿರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳ ಪೈಕಿ ಮೂವರ ಜಾಮೀನು ಅರ್ಜಿ ತಿರಸ್ಕರಿಸಿರುವ ಸೂರತ್ ನ್ಯಾಯಾಲಯ, ಇಬ್ಬರಿಗೆ ಜಾಮೀನು ನೀಡಿದೆ.
ಜಾಮೀನು ಪಡೆದ ಇಬ್ಬರು ವೈದ್ಯರಾಗಿದ್ದು, ಇವರು ಸಿವಿಲ್ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ 15 ದಿನಗಳ ಕಾಲ ಕರ್ತವ್ಯ ನಿರ್ವಹಿಸುವಂತೆ ವಿಶೇಷ ಷರತ್ತು ವಿಧಿಸಿದೆ.
ರೆಮ್ಡಿಸಿವಿರ್ ಚಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟ ಮಾಡಿದ ಆರೋಪದ ಮೇಲೆ ಇಬ್ಬರು ವೈದ್ಯರು ಸೇರಿದಂತೆ ಐವರು ಆರೋಪಿಗಳನ್ನು ಸೂರತ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆರೋಪಿಗಳನ್ನು ಡಾ. ಸಾಹಿಲ್ ಗೊಘಾರಿ, ಡಾ. ಹಿತೇಶ್ ದಾಭಿ, ಜೈನೀಶ್ ಕಕಾಡಿಯಾ, ಭದ್ರೇಶ್ ನಕ್ರಾನಿ ಮತ್ತು ಜೈಮಿಶ್ ಜಿಕದಾರಾ ಎಂದು ಗುರುತಿಸಲಾಗಿದೆ.
ಜೈನೀಶ್ ತನ್ನ ಸಹಚರರೊಂದಿಗೆ ಸೇರಿ ರೆಮ್ಡಿಸಿವಿರ್ ಔಷಧವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸ್ ತನಿಖೆಯ ವೇಳೆ ತಿಳಿದು ಬಂದಿದೆ. ಜೈನೀಶ್‌ನಿಂದ ಚುಚ್ಚುಮದ್ದಿನ ಮೂರು ಬಾಟಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಭದ್ರೇಶ್ ನಕ್ರಾನಿಯಿಂದ ಇವುಗಳನ್ನು 39,000 ರೂ.ಗಳಿಗೆ ಖರೀದಿಸಿದ್ದಾಗಿ ಜೈನೀಶ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ.
ಕೋವಿಡ್ ರೋಗಿಗಳ ಆರೈಕೆಗೆ ವೈದ್ಯರ ಕೊರತೆಯಿದೆ. ಹಾಗಾಗಿ ಇಬ್ಬರು ವೈದ್ಯರನ್ನು ಬಿಡುಗಡೆ ಮಾಡಿದರೆ ಅವರು ರೋಗಿಗಳ ಆರೈಕೆ ಮಾಡಬಹುದು ಎಂದು ತಿಳಿಸಿದೆ. ಜಾಮೀನಿನ ಮೇಲೆ ಬಿಡುಗಡೆಯಾಗಿರುವ ವೈದ್ಯರು ಏಪ್ರಿಲ್ 30ರಿಂದ ಮೇ 14ರವರೆಗೆ 15 ದಿನಗಳ ಕಾಲ ಸಿವಿಲ್ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಕೆಲಸ ಮಾಡಲಿದ್ದಾರೆ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಈ ಇಬ್ಬರಿಗೆ ಕೆಲಸ ಹಂಚಲಿದ್ದು, ಅವರ ಮೇಲೆ ನಿಗಾ ಇಡಲಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ. ಇಬ್ಬರು ವೈದ್ಯರು ಮಾಡಿರುವ ಕೆಲಸ ತೃಪ್ತಿಕರವಾಗಿದೆಯಾ ಎಂಬುವುದನ್ನು ಕೂಡ ಸಿಎಂಒ ನ್ಯಾಯಾಲಯಕ್ಕೆ ತಿಳಿಸಬೇಕಾಗಿದೆ.