ಅಹಮದಾಬಾದ್ (ಗುಜರಾತ್): ಡೆಂಘೀಗೆ ಒಳಗಾಗಿ ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುಜರಾತ್ನ ಬಿಜೆಪಿ ಶಾಸಕಿ ಆಶಾ ಪಟೇಲ್ (44) ಇಂದು ಕೊನೆಯುಸಿರೆಳೆದಿದ್ದಾರೆ.
ಮೆಹ್ಸಾನಾ ಜಿಲ್ಲೆಯ ಉಂಜಾ ವಿಧಾನಸಭಾ ಕ್ಷೇತ್ರದ ಶಾಸಕಿ ಆಶಾ ಪಟೇಲ್ ಅವರು ದೆಹಲಿಯಿಂದ ಹಿಂದಿರುಗಿದ ಬಳಿಕ ಡೆಂಘೀಗೆ ತುತ್ತಾಗಿದ್ದರು. ಶುಕ್ರವಾರ ಸಂಜೆ ಅಹಮದಾಬಾದ್‌ನ ಝೈಡಸ್ ಆಸ್ಪತ್ರೆಗೆ ದಾಖಲಾಗಿದ್ದರು.
ವೆಂಟಿಲೇಟರ್ ಬೆಂಬಲದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಾ ಹೋಗಿತ್ತು. ವೈದ್ಯರ ತಂಡವು ಅತ್ಯುತ್ತಮ ಪ್ರಯತ್ನ ಮಾಡಿದರೂ ಅವರನ್ನು ಉಳಿಸಲಾಗಲಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರೀನಗರದಲ್ಲಿ ಪಿಡಿಪಿ ಯುವ ಸಮಾವೇಶಕ್ಕೆ ಅನುಮತಿ ರದ್ದು.. ಮೆಹಬೂಬಾ ಮುಫ್ತಿಗೆ ಗೃಹಬಂಧನ
ಆಶಾ ಪಟೇಲ್ ಅವರ ಪಾರ್ಥಿವ ಶರೀರವನ್ನು ಉಂಜಾಗೆ ಕರೆದೊಯ್ದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಅಂತ್ಯಕ್ರಿಯೆ ನಡೆಯಲಿದೆ.
ಆಶಾ ಅವರು ಬಹು ಅಂಗಾಂಗ ವೈಫಲ್ಯದಿಂದ ಕೂಡ ಬಳಲುತ್ತಿದ್ದರು ಎಂದು ರಾಜ್ಯ ವಿಧಾನಸಭೆ ಸ್ಪೀಕರ್ ರಾಜೇಂದ್ರ ತ್ರಿವೇದಿ ಹೇಳಿದ್ದಾರೆ. ಇವರ ನಿಧನಕ್ಕೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ರಾಜ್ಯಪಾಲ ಆಚಾರ್ಯ ದೇವವ್ರತ್ ಸಂತಾಪ ಸೂಚಿಸಿದ್ದಾರೆ.
2017ರಲ್ಲಿ ಕಾಂಗ್ರೆಸ್ನಿಂದ ಸ್ಫರ್ಧಿಸಿ ಉಂಜಾ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿದ್ದರು. ಆನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದ ಆಶಾ, 2019ರಲ್ಲಿ ಉಪಚುನಾವಣೆಯಲ್ಲಿ ಗೆದ್ದಿದ್ದರು.