ಬೆಂಗಳೂರು : ಸರಕು ಮತ್ತು ಸೇವಾ ತೆರಿಗೆ ಅಥವಾ ಸಾಮಾನ್ಯವಾಗಿ ಕರೆಯಲ್ಪಡುವ ಜಿಎಸ್ಟಿ ತೆರಿಗೆ ವ್ಯವಸ್ಥೆಯು ಹಲವಾರು ವರ್ಷಗಳ ರಾಜಕೀಯ ಮತ್ತು ಕಾನೂನಾತ್ಮಕ ಸಂಘರ್ಷಗಳ ನಂತರ ಜುಲೈ 1, 2017ರಂದು ಜಾರಿಗೆ ಬಂದಿತು. ಜಿಎಸ್ಟಿ ಬಂದ ಕೂಡಲೇ ಇದರ ಎಲ್ಲ ನಿಯಮಗಳು ಜಾರಿಯಾಗಲಿಲ್ಲ. ಹಲವಾರು ಬಾರಿ ಇದನ್ನು ತಿದ್ದುಪಡಿ ಮಾಡಿ, ಹೊಸ ನಿಯಮಗಳನ್ನು ಸೇರಿಸಲಾಗಿದೆ.
ಜಿಎಸ್ಟಿ ಜಾರಿಯಾಗಿ 5 ವರ್ಷ ತುಂಬುತ್ತಿರುವ ಮುನ್ನ ಜೂನ್ 28-29ರಂದು ಜಿಎಸ್ಟಿ ಮಂಡಳಿಯ 47ನೇ ಸಭೆ ನಡೆಯಲಿದೆ. ಆದರೆ, ಜಿಎಸ್ಟಿ ಹೇಗೆಲ್ಲ ಭಾರತದಲ್ಲಿ ಜಾರಿಯಾಯಿತು, ಈ ಹಂತಕ್ಕೆ ಬರಲು ಏನೇನೆಲ್ಲ ಬದಲಾವಣೆಗಳಾದವು ಎಂಬುದನ್ನು ದಿನಾಂಕದ ಆಧಾರದಲ್ಲಿ ನೋಡೋಣ ಬನ್ನಿ..
ಜುಲೈ 17, 2000 : ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಕರೂಪದ ಮಾರಾಟ ತೆರಿಗೆ ಜಾರಿಗೊಳಿಸಲು, ತೆರಿಗೆ ಆಧರಿತ ಪ್ರೋತ್ಸಾಹ ಧನ ನೀಡುವ ಬಗ್ಗೆ ಪರಿಶೀಲನೆಗೆ, ರಾಜ್ಯಗಳು ವ್ಯಾಟ್ ತೆರಿಗೆ ಪದ್ಧತಿಗೆ ಬದಲಾಗುವುದು ಹಾಗೂ ಕೇಂದ್ರೀಯ ತೆರಿಗೆ ಪದ್ಧತಿಯಲ್ಲಿನ ಸುಧಾರಣೆಗಳ ಬಗ್ಗೆ ಪರಿಶೀಲಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಹಣಕಾಸು ಮಂತ್ರಿಗಳ ನೇತೃತ್ವದಲ್ಲಿ ಒಂದು ಉನ್ನತಾಧಿಕಾರದ ಸಮಿತಿ ರಚಿಸಿತು.
ಫೆಬ್ರವರಿ 28, 2006 : ಏಪ್ರಿಲ್ 1, 2010ರಿಂದ ಜಿಎಸ್ಟಿ ಜಾರಿಗೊಳಿಸಲಾಗುವುದು ಎಂದು ಹಣಕಾಸು ಸಚಿವ ಪಿ. ಚಿದಂಬರಂ ಘೋಷಿಸಿದರು.
ನವೆಂಬರ್ 10, 2009 : ರಾಜ್ಯ ಹಣಕಾಸು ಸಚಿವರ ಉನ್ನತಾಧಿಕಾರದ ಸಮಿತಿಯು ಭಾರತದಲ್ಲಿ ಜಿಎಸ್ಟಿ ಅಳವಡಿಸುವ ಕುರಿತು ಪ್ರಥಮ ಅಧ್ಯಯನ ವರದಿ ಸಲ್ಲಿಸಿತು.
ಫೆಬ್ರವರಿ 26, 2010 : ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಜಿಎಸ್ಟಿ ಜಾರಿಗೊಳಿಸುವುದನ್ನು ಒಂದು ವರ್ಷ ಅಂದರೆ ಏಪ್ರಿಲ್ 2011ಕ್ಕೆ ಮುಂದೂಡಿದರು.
ಮಾರ್ಚ್ 22, 2011 : ಜಿಎಸ್ಟಿ ಜಾರಿಗಾಗಿ ಸಂವಿಧಾನ ತಿದ್ದುಪಡಿ (115ನೇ ತಿದ್ದುಪಡಿ)ಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.
ಮಾರ್ಚ್ 29, 2011 : ಜಿಎಸ್ಟಿ ಜಾರಿಗಾಗಿ ಸಂವಿಧಾನ ತಿದ್ದುಪಡಿ (115ನೇ ತಿದ್ದುಪಡಿ)ಯನ್ನು ಲೋಕಸಭೆಯ ಸ್ಥಾಯಿ ಸಮಿತಿಗೆ ಒಪ್ಪಿಸಲಾಯಿತು.
ಮಾರ್ಚ್ 28, 2013 : ಜಿಎಸ್ಟಿ ನೆಟ್ವರ್ಕ್ಅನ್ನು ಸೆಕ್ಷನ್ 25 ಪ್ರೈವೇಟ್ ಲಿಮಿಟೆಡ್ ಕಂಪನಿ ಎಂದು ಘೋಷಿಸಲಾಯಿತು.
ಆಗಸ್ಟ್ 7, 2013 : ಜಿಎಸ್ಟಿ ಜಾರಿಗಾಗಿ ಸಂವಿಧಾನ ತಿದ್ದುಪಡಿ (115ನೇ ತಿದ್ದುಪಡಿ)ಯ ಬಗ್ಗೆ ಲೋಕಸಭೆಯ ಸ್ಥಾಯಿ ಸಮಿತಿಯು ತನ್ನ ವರದಿ ನೀಡಿತು.
ಮೇ 18, 2014 : 15ನೇ ಲೋಕಸಭೆಯು ವಿಸರ್ಜನೆಯಾಗುವುದರೊಂದಿಗೆ ಸಂವಿಧಾನ ತಿದ್ದುಪಡಿ (115ನೇ ತಿದ್ದುಪಡಿ)ಯ ಬಿಲ್ ಅಮಾನ್ಯಗೊಂಡಿತು.
ಡಿಸೆಂಬರ್ 19, 2014 : ಜಿಎಸ್ಟಿ ಜಾರಿಗಾಗಿ ಸಂವಿಧಾನ ತಿದ್ದುಪಡಿ (122 ತಿದ್ದುಪಡಿ)ಯ ಬಿಲ್ ಅನ್ನು ಲೋಕಸಭೆಯಲ್ಲಿ ಇಡಲಾಯಿತು.
ಮೇ 6, 2015 : ಸಂವಿಧಾನ ತಿದ್ದುಪಡಿ (122 ತಿದ್ದುಪಡಿ) ಯ ಬಿಲ್ ಲೋಕಸಭೆಯಲ್ಲಿ ಪಾಸ್ ಆಯಿತು.
ಮೇ 14, 2015 : ಸಂವಿಧಾನ ತಿದ್ದುಪಡಿ (122 ತಿದ್ದುಪಡಿ) ಯ ಬಿಲ್ ಅನ್ನು ರಾಜ್ಯಸಭೆಯು ಆಯ್ಕೆ ಸಮಿತಿಗೆ ವರ್ಗಾಯಿಸಿತು.
ಜುಲೈ 22, 2015 : ಆಯ್ಕೆ ಸಮಿತಿಯು ಸಂವಿಧಾನ ತಿದ್ದುಪಡಿ (122 ತಿದ್ದುಪಡಿ) ಯ ಬಿಲ್ ಬಗ್ಗೆ ವರದಿ ನೀಡಿತು.
ಡಿಸೆಂಬರ್ 4, 2015 : ಮುಖ್ಯ ಹಣಕಾಸು ಸಲಹೆಗಾರ ಅರವಿಂದ್ ಸುಬ್ರಮಣಿಯನ್ ನೇತೃತ್ವದ ಸಮಿತಿಯು ಸಂಭವನೀಯ ಜಿಎಸ್ಟಿ ದರಗಳ ಬಗ್ಗೆ ವರದಿ ನೀಡಿತು.
ಆಗಸ್ಟ್ 3, 2016: ಸಂವಿಧಾನ ತಿದ್ದುಪಡಿ (122 ತಿದ್ದುಪಡಿ) ಯ ಬಿಲ್ ಅನ್ನು ರಾಜ್ಯಸಭೆಯು ಕೆಲ ಬದಲಾವಣೆಗಳೊಂದಿಗೆ ಅಂಗೀಕರಿಸಿತು.
ಆಗಸ್ಟ್ 8, 2016: ಸಂವಿಧಾನ ತಿದ್ದುಪಡಿ (122 ತಿದ್ದುಪಡಿ) ಯ ಬಿಲ್ ಲೋಕಸಭೆಯಲ್ಲಿ ಪಾಸ್ ಆಯಿತು.
ಆಗಸ್ಟ್ 9, 2016: ಸಂವಿಧಾನ ತಿದ್ದುಪಡಿ (122 ತಿದ್ದುಪಡಿ) ಯ ಬಿಲ್ ಅನ್ನು ಸಂವಿಧಾನದ (101ನೇ ತಿದ್ದುಪಡಿ) ಕಾಯ್ದೆಯಾಗಿ ಅಧಿಸೂಚನೆ ಹೊರಡಿಸಲಾಯಿತು.
ಆಗಸ್ಟ್ 12, 2016: ಅಸ್ಸೋಂ ರಾಜ್ಯವು ಸಂವಿಧಾನ ತಿದ್ದುಪಡಿ (122 ತಿದ್ದುಪಡಿ) ಯ ಬಿಲ್ ಅನ್ನು ಅನುಮೋದಿಸಿದ ಮೊದಲ ರಾಜ್ಯವಾಯಿತು.
ಸೆಪ್ಟೆಂಬರ್ 1, 2016: ಒಡಿಶಾ ರಾಜ್ಯವು ಸಂವಿಧಾನ ತಿದ್ದುಪಡಿ (122 ತಿದ್ದುಪಡಿ) ಯ ಬಿಲ್ ಅನ್ನು ಅನುಮೋದಿಸಿದ 16ನೇ ರಾಜ್ಯವಾಯಿತು.
ಸೆಪ್ಟೆಂಬರ್ 8, 2016: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಂವಿಧಾನ ತಿದ್ದುಪಡಿ (122 ತಿದ್ದುಪಡಿ) ಯ ಬಿಲ್ ಗೆ ಒಪ್ಪಿಗೆ ನೀಡಿದರು.
ಸೆಪ್ಟೆಂಬರ್ 12, 2016: ಜಿಎಸ್ಟಿ ಮಂಡಳಿ ರಚಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತು.
ಸೆಪ್ಟೆಂಬರ್ 22, 2016: ನವದೆಹಲಿಯಲ್ಲಿ ಜಿಎಸ್ಟಿ ಮಂಡಳಿ ತನ್ನ ಪ್ರಥಮ ಸಭೆ ನಡೆಸಿತು.
ಮಾರ್ಚ್ 29, 2017: ಜಿಎಸ್ಟಿ ಸಂಬಂಧಿತ ಬಿಲ್ಗಳು ಲೋಕಸಭೆಯಲ್ಲಿ ಪಾಸ್ ಆದವು.
ಏಪ್ರಿಲ್ 6, 2017: ಜಿಎಸ್ಟಿ ಸಂಬಂಧಿತ ಬಿಲ್ಗಳು ರಾಜ್ಯಸಭೆಯಲ್ಲಿ ಪಾಸ್ ಆದವು.
ಏಪ್ರಿಲ್ 12, 2017: ಜಿಎಸ್ಟಿ ಕಾನೂನುಗಳು ನೋಟಿಫೈ ಆದವು.
ಮೇ 18, 2017: ಸರಕು ಹಾಗೂ ಸೇವೆಗಳ ಮೇಲೆ ತೆರಿಗೆ ಹಾಗೂ ಸೆಸ್ಗಳನ್ನು ಜಿಎಸ್ಟಿ ಮಂಡಳಿಯು ಘೋಷಿಸಿತು.