ನವದೆಹಲಿ: ಸುಮಾರು 583 ಕೋಟಿ ರೂ.ಗಳ ವೆಚ್ಚದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಗಾಗಿ ಎರಡು ಮಾಲಿನ್ಯ ನಿಯಂತ್ರಣ ಹಡಗುಗಳನ್ನು (ಪಿಸಿವಿ) ನಿರ್ಮಿಸಲು ಕೇಂದ್ರ ರಕ್ಷಣಾ ಸಚಿವಾಲಯ ಮಂಗಳವಾರ ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ (ಜಿಎಸ್‌ಎಲ್) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ವಿಶೇಷ ಹಡಗುಗಳನ್ನು ಜಿಎಸ್ಎಲ್ ನಿರ್ಮಿಸಲಿದ್ದು, ಇವುಗಳನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದೆ.
ಸಮುದ್ರದಲ್ಲಿನ ತೈಲ ಸೋರಿಕೆ ವಿಪತ್ತುಗಳಿಗೆ ಪ್ರತಿಕ್ರಿಯಿಸುವ ಐಸಿಜಿಯ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ಮಾಲಿನ್ಯ ಪ್ರತಿಕ್ರಿಯೆ (ಪಿಆರ್) ದಕ್ಷತೆಯನ್ನು ಹೆಚ್ಚಿಸುತ್ತದೆ. ಈ ಎರಡು ಹಡಗುಗಳು ಕ್ರಮವಾಗಿ ನವೆಂಬರ್ 2024 ಮತ್ತು ಮೇ 2025 ರೊಳಗೆ ನಿರ್ಮಾಣವಾಗಲಿವೆ.
ಪ್ರಸ್ತುತ, ಭಾರತೀಯ ಕೋಸ್ಟ್ ಗಾರ್ಡ್ ಮುಂಬೈ, ವಿಶಾಖಪಟ್ಟಣಂ ಮತ್ತು ಪೋರ್ಬಂದರಿನಲ್ಲಿ ಮೂರು ಮಾಲಿನ್ಯ ನಿಯಂತ್ರಣ ಹಡಗುಗಳನ್ನು ಹೊಂದಿದೆ. ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶಗಳಲ್ಲಿನ ಅವಶ್ಯಕತೆಗಳಿಗಾಗಿ ಹೊಸ ಪಿಸಿವಿಗಳನ್ನು ಯೋಜಿಸಲಾಗಿದೆ.
ಇದನ್ನೂ ಓದಿ:ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಶೇ.77.8ರಷ್ಟು ಪರಿಣಾಮಕಾರಿ : ಎಸ್‌ಇಸಿ ವರದಿ
ಆತ್ಮನಿರ್ಭರ್ ಭಾರತ್ ಅಭಿಯಾನದಡಿ ಆಗಿರುವ ಈ ಒಪ್ಪಂದವು ಸ್ಥಳೀಯ ಹಡಗು ನಿರ್ಮಾಣ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಸುಮಾರು 200 ಎಂಎಸ್‌ಎಂಇ ಮಾರಾಟಗಾರರನ್ನು ಒಳಗೊಂಡ ಹಡಗು ನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ.