ನವಸಾರಿ(ಗುಜರಾತ್): ತಮ್ಮ ಮದುವೆಯನ್ನು ಸದಾ ಕಾಲ ಸ್ಮರಣೀಯವಾಗಿಸಿಟ್ಟುಕೊಳ್ಳುವ ಸಲುವಾಗಿ ವಧು ವರರು ಮದುವೆ ಮಂಟಪಕ್ಕೆ ಬರುವ ವೇಳೆ ಎಲ್ಲ ಹಳೆಯ ಸಂಪ್ರದಾಯಗಳನ್ನು ಮುರಿದು ಬುಲೆಟ್, ಟ್ರಾಕ್ಟರ್, ಕುದುರೆ, ಹಳೆಯ ವಿಂಟೇಜ್ ಕಾರಿನಲ್ಲಿ ಅಥವಾ ದುಬಾರಿ ಕಾರಿನಲ್ಲಿ ಬರುವುದನ್ನು ನೀವು ನೋಡಿರಬಹುದು. ಆದರೆ, ಇಲ್ಲೊಂದು ಕಡೆ ವರ ಜೆಸಿಬಿ ಏರಿ ಬಂದಿದ್ದಾನೆ. ಗುಜರಾತ್‌ನ ನವಸಾರಿ ಜಿಲ್ಲೆಯ ಚಿಖಲಿ ತಾಲೂಕಿನಲ್ಲಿ ನಡೆದ ವಿವಾಹ ಮೆರವಣಿಗೆಯಲ್ಲಿ ವರ ಜೆಸಿಬಿ ಯಂತ್ರದಲ್ಲಿ ಮೂಲಕ ಮದುವೆ ಮಂಟಪಕ್ಕೆ ಬಂದು ಎಲ್ಲರ ಗಮನ ಸೆಳೆದಿದ್ದಾನೆ.
ಆಶ್ಚರ್ಯಚಕಿತರಾದ ಜನತೆ: ಜೆಸಿಬಿ ಯಂತ್ರದಲ್ಲಿ ಬಂದ ಧೋಡಿಯಾ ಪಟೇಲ್ ಸಮುದಾಯದ ಯುವಕ ದುಲ್ಹೇರಾಜ ಅವರನ್ನು ಬುಡಕಟ್ಟು ಸಂಪ್ರದಾಯ ಮತ್ತು ಆಚರಣೆಯಂತೆ ಮದುವೆ ಮಾಡಲಾಗಿದೆ. ಸಾಮಾನ್ಯವಾಗಿ ಜೆಸಿಬಿ ಯಂತ್ರವನ್ನು ವಿಧ್ವಂಸಕದಲ್ಲಿ ಬಳಸಲಾಗುತ್ತದೆ. ಇಂತಹ ಮದುವೆ ಮೆರವಣಿಗೆಯನ್ನು ನೋಡಿದ ಜನ ಆಶ್ಚರ್ಯಚಕಿತರಾಗಿದ್ದಾರೆ.
ಜೆಸಿಬಿ ಬಕೆಟ್ನಲ್ಲಿ ಕುಳಿತ ವರ: ವಿವಾಹದಲ್ಲಿ ವರನ ಕಡೆಯವರು ಜೆಸಿಬಿ ಯಂತ್ರಕ್ಕೆ ಹೂ ಹಾಗೂ ಹಾರಗಳಿಂದ ಅಲಂಕರಿಸಿ ವರನನ್ನು ಬಕೆಟ್ನಲ್ಲಿ ಕೂರಿಸಿ ಮದುವೆ ಮಂಟಪಕ್ಕೆ ಕರೆ ತಂದಿದ್ದಾರೆ. ಬಳಿಕ ವರನ ಸ್ನೇಹಿತರು ಹೆಗಲ ಮೇಲೆ ಹೊತ್ತುಕೊಂಡು ಮದುವೆ ಮಂಟಪಕ್ಕೆ ಕರೆ ತಂದಿದ್ದಾರೆ. ಈ ವಿಶಿಷ್ಟ ಮದುವೆ ಮೆರವಣಿಗೆ ನೋಡಲು ಸಾವಿರಾರು ಜನರು ನೆರೆದಿದ್ದರು. ನವಸಾರಿ ಜಿಲ್ಲೆಯಲ್ಲಿ ಈ ವಿಶಿಷ್ಟ ಮೆರವಣಿಗೆ ಮೊದಲ ಬಾರಿಗೆ ನಡೆದಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ವಿವಾಹಕ್ಕೆ ಹೆಲಿಕಾಪ್ಟರ್ ಏರಿ ಬಂದಿದ್ದ ವರ: ತುಮಕೂರಿಂದ ಬೆಂಗಳೂರಿಗೆ ಬರಲು ಖರ್ಚಾಗಿದ್ದೆಷ್ಟು ಗೊತ್ತಾ?
ವಿಶಿಷ್ಟ ಸಂಪ್ರದಾಯ: ಮದುವೆಯ ಸೀಸನ್ ಎಂದರೆ ಅದು ಗ್ರಾಮೀಣ ಪ್ರದೇಶವಾಗಲಿ ಅಥವಾ ನಗರ ಪ್ರದೇಶವಾಗಲಿ ಸಾಮಾನ್ಯವಾಗಿ ಫೆಬ್ರವರಿ ತಿಂಗಳಿನಿಂದ ಪ್ರಾರಂಭವಾಗುತ್ತದೆ. ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಮದುವೆಯನ್ನು ವಧು ಮತ್ತು ವರರು ಜೀವನ ಪರ್ಯಂತ ಸ್ಮರಣೀಯವಾಗಿಸುವ ಸಲುವಾಗಿ, ಏನಾದರೂ ಹೊಸದನ್ನು ಮಾಡಲಾಗುತ್ತದೆ. ಪ್ರಸ್ತುತ ನವಸಾರಿ ಜಿಲ್ಲೆಯಲ್ಲಿ ಮೂಲ ಹಳ್ಳಿಗಾಡಿನ ಶೈಲಿಯಲ್ಲಿ ವರನನ್ನು ಕರೆತರುವ ಸಂಪ್ರದಾಯವು ಮತ್ತೆ ಚಲಾವಣೆಗೆ ಬಂದಿದೆ.
ಗ್ರಾಮೀಣ ಶೈಲಿ ಜೀವಂತ: ಗುಜರಾತ್‌ನ ಹಳ್ಳಿಗಳಲ್ಲಿ ಯುವಕರು ಗ್ರಾಮೀಣ ಜೀವನ ಶೈಲಿಯನ್ನು ಅನುಸರಿಸುತ್ತಿದ್ದಾರೆ. ಕೆಲವೊಮ್ಮೆ ಮದುವೆಯಲ್ಲಿ ಹಳ್ಳಿಯ ಉಡುಗೆ ತೊಟ್ಟು ಗಮನ ಸೆಳೆಯುತ್ತಾರೆ. ಇಲ್ಲಿನ ಧೋಡಿಯಾ ಪಟೇಲ್ ಸಮುದಾಯದ ಯುವಕ ವರ ದುಲ್ಹೇರಾಜ ಅವರಿಗೆ ಏನಾದರೂ ವಿಭಿನ್ನವಾದ ಕೆಲಸ ಮಾಡುವ ಆಸೆ ಇತ್ತು. ಹಾಗಾಗಿ ಜೆಸಿಬಿ ಯಂತ್ರದ ಮೂಲಕ ಮಂಟಪಕ್ಕೆ ಬರಲು ನಿರ್ಧರಿದ್ದರು.
ಜೆಸಿಬಿ ಮುಂಭಾಗದ ಭಾಗದ ಬಕೆಟ್ನಲ್ಲಿ ಮಂಟಪ ಸಿದ್ಧಪಡಿಸಲಾಗಿತ್ತು. ಅದರಲ್ಲಿ ಸೋಫಾ ಸೀಟ್ ಬಾಕ್ಸ್ ಹಾಕಲಾಗಿತ್ತು. ಇಷ್ಟೇ ಅಲ್ಲದೇ ಜೆಸಿಬಿಯ ಬಕೆಟ್ನ್ನು ಗುಲಾಬಿ ಹೂಗಳಿಂದ ಅಲಂಕರಿಸಲಾಗಿತ್ತು. ವಾಹನದ ಮುಂದೆ ಮದುವೆಯಲ್ಲಿ ನೆರೆದಿದ್ದ ಜನ ಡಿಜೆ ಸದ್ದಿಗೆ ಹೆಜ್ಜೆ ಹಾಕಿದ್ದಾರೆ. ಈ ಅದ್ಧೂರಿ ಮೆರವಣಿಗೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಕಾರು, ಕುದುರೆ ಅಲ್ಲ, JCB ಏರಿ ಮದುವೆ ಮಂಟಪಕ್ಕೆ ಬಂದ ನವಜೋಡಿ!!